*ಮೊದಿಯವರ ಉದ್ದುದ್ದ ಭಾಷಣದ ಯೋಗ್ಯತೆ ಇಷ್ಟೇನಾ? ಎನ್ನುತ್ತಲೇ ಬಿಜೆಪಿ ನಾಯಕರಿಂಗೆ ಟಾಂಗ್ ನೀಡಿದ ಸಿಎಂ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ: ಶಿಗ್ಗಾಂವಿ ಉಪಚುನಾವಣಾ ಅಖಾಡ ರಂಗೇರಿದೆ. ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಎನ್ ಡಿಎ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಪಠಾಣ್ ಕಣದಲ್ಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ನನಗೆ ಆಸಕ್ತಿ ಇಲ್ಲ. ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳುತ್ತಲೇ ಅವರೇ ಟಿಕೆಟ್ ತಗೊಂಡು ಅವರೇ ನಿಂತರು. ಈಗ ಉಪ ಚುನಾವಣೆಯಲ್ಲಿ ನನ್ನ ಮಗ ನಿಲ್ಲಲ್ಲ, ನನ್ನ ಮಗನಿಗೆ ಟಿಕೆಟ್ ಕೇಳಲ್ಲ ಎನ್ನುತ್ತಿದ್ದ ಬೊಮ್ಮಾಯಿ ಕೊನೆಗೆ ಅವರ ಮಗನಿಗೇ ನಿಲ್ಲಿಸಿದ್ದಾರೆ. ಬೊಮ್ಮಾಯಿ ಯಾವಾಗಲೂ ಇಷ್ಟೆ. ಹೇಳೋದೊಂದು, ಮಾಡೋದೊಂದು. ಈ ಬಾರಿ ಶಿಗ್ಗಾವಿ ಉಪ ಚುನಾವಣೆಯಲ್ಲಿ ಪಠಾಣ್ ಗೆಲ್ಲುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದರು.
ಸಿಎಂ ಭಾಷಣದ ಹೈಲೈಟ್ಸ್:
ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ಮಗನ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಅಭ್ಯರ್ಥಿಯಾಗಿದ್ದಾರೆ ಇವರನ್ನು ಗೆಲ್ಲಿಸಿ ಕಳಿಸಿ ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ವಂಶ ಪಾರಂಪರ್ಯದ ವಿರುದ್ಧ ಉದ್ದುದ್ದ ಭಾಷಣ ಮಾಡ್ತಾರೆ: ಇಲ್ಲಿ ಎಸ್.ಆರ್.ಬೊಮ್ಮಾಯಿ ಮೊಮ್ಮಗನಿಗೆ, ಬಸವರಾಜ ಬೊಮ್ಮಾಯಿ ಪುತ್ರನಿಗೆ ಟಿಕೆಟ್ ನೀಡಿದ್ದಾರೆ. ಉದ್ದುದ್ದ ಭಾಷಣದ ಯೋಗ್ಯತೆ ಇಷ್ಟೆನಾ? ಮೋದಿಯವರೇ ಉತ್ತರಿಸಬೇಕು ಎಂದರು.
ಬಿಜೆಪಿ ಸುಳ್ಳುಗಳ ಮೇಲೇ ಮಲಗಿರುವ ಪಕ್ಷ. ಹೊಸ ಹೊಸ ಸುಳ್ಳುಗಳನ್ನು ಪದೇ ಪದೇ ಹೇಳುತ್ತಾ ಗೋಬಲ್ಸ್ ಥಿಯರಿ ಪಾಲಿಸುತ್ತಿದೆ
ಸಾಮಾಜಿಕ ನ್ಯಾಯದ ವಿರೋಧಿ, ಬಡವರು-ಮಧ್ಯಮ ವರ್ಗದವರ ಕಲ್ಯಾಣದ ವಿರೋಧಿಯಾದ ಬಿಜೆಪಿ ಕೇವಲ ಕಾರ್ಪೋರೇಟ್ ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ. ಜಾತಿ-ಧರ್ಮದ ಹೆಸರಲ್ಲಿ ಬಡವರು-ಮಧ್ಯಮ ವರ್ಗದವರನ್ನು ಪರಸ್ಪರ ಕಚ್ಚಾಡಿಸುತ್ತಾ ರಾಜಕೀಯ ಮಾಡುತ್ತದೆ. ಜನ ಕಲ್ಯಾಣದ ಮೂಲಕ ಬಿಜೆಪಿ ರಾಜಕಾರಣ ಮಾಡಿದ ಉದಾಹರಣೆಯೇ ಇಲ್ಲ
ರಾಜ್ಯದ ಬಡವರು, ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ. ಆದರೆ ಬಿಜೆಪಿ ಒಂದು ಕಡೆ ಈ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಮಾನಿಸುತ್ತಲೇ ಮತ್ತೊಂದು ಕಡೆ ಈ ಗ್ಯಾರಂಟಿಗಳನ್ನು ನಿಲ್ಲಿಸಲು ಷಡ್ಯಂತ್ರ ನಡೆಸುತ್ತಿದೆ
ನಾನು ಪ್ರಧಾನಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಇಬ್ಬರಿಗೂ ನೇರ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೇನೆ. ನಮ್ಮ ಅವಧಿಯ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದೇನೆ. ಇವತ್ತಿನವರೆಗೂ ಅವರು ಸವಾಲು ಸ್ವೀಕರಿಸಿಲ್ಲ
ಸುಳ್ಳುಗಳಿಗೆ ಜೋತುಬಿದ್ದು , ದೇಶದ ಜನರನ್ನು ವಿಭಜಿಸಿ ರಾಜಕಾರಣ ಮಾಡುವ ಇವರಿಗೆ ಜನರ ಕಲ್ಯಾಣದಲ್ಲಿ, ರಾಜ್ಯದ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ
*ಮೋದಿ ಕಪ್ಪು ಹಣ ವಾಪಾಸ್ ತರಲಿಲ್ಲ-ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸಲಿಲ್ಲ. ಮೋದಿ ಮಾಡಿದ ಉದ್ದುದ್ದ ಭಾಷಣದಲ್ಲಿ ಯಾವುದನ್ನಾದರೂ ಈಡೇರಿಸಿದ್ದಾರಾ ? ಒಂದೇ ಒಂದು ಉದಾಹರಣೆ ಕೊಡಿ ಎಂದು ಸವಾಲು ಹಾಕಿದರು.
ಕರ್ನಾಟಕದಲ್ಲಿ ಸಂಬಳ ಕೊಡಲು ಹಣವಿಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ದೇಶದ ಆರ್ಥಿಕತೆಗೂ, ರಾಜ್ಯದ ಆರ್ಥಿಕತೆಗೂ ಹೋಲಿಕೆ ಮಾಡಿ ನೋಡಿ. ರಾಜ್ಯದ ಆರ್ಥಿಕತೆ ಎಷ್ಟು ಗಟ್ಟಿಯಾಗಿ ಪ್ರಗತಿ ಆಗುತ್ತಿದೆ ಎನ್ನುವ ಸತ್ಯ ಹೇಳಿ ಎಂದರು
ಲೋಕಸಭಾ ಚುನಾವಣೆಯಲ್ಲಿ ವಿನೋದ್ ಅಸೂಟಿ ಅವರಿಗೆ 9 ಸಾವಿರ ಲೀಡ್ ಶಿಗ್ಗಾವಿಯಲ್ಲಿ ಸಿಕ್ಕಿದೆ. ಈ ಬಾರಿ ಪಠಾಣ್ ಅವರಿಗೆ ದುಪ್ಪಟ್ಟು ಲೀಡ್ ಕೊಟ್ಟು ಗೆಲ್ಲಿಸುವ ಮೂಲಕ ನನಗೆ ಶಕ್ತಿ ಕೊಡಿ
ಸಾಕು ಬೊಮ್ಮಾಯಿ ಅವರಿಗೆ ಇಷ್ಟು ಬಾರಿ ಗೆಲ್ಲಿಸಿದ್ದು ಸಾಕು. ಈ ಬಾರಿ ಪಠಾಣ್ ಗೆಲ್ಲಿಸಿ ಎಂದರು.
ಕೇವಲ ಷಡ್ಯಂತ್ರದ ಮೂಲಕ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಲು ರಾಜ್ಯಪಾಲರನ್ನು ಎತ್ತಿ ಕಟ್ಟಿದೆ. ED ಮೂಲಕವೂ ನನಗೆ ತೊಂದರೆ ಕೊಡುತ್ತಿದೆ. ಬಿಜೆಪಿಯ ಝ ಷಡ್ಯಂತ್ರ, ಕುತಂತ್ರ ಮತ್ತು ರಾಜ್ಯದ ಜನರನ್ನು ವಿಭಜಿಸುವ ಅನಾಗರಿಕ ರಾಜಕಾರಣವನ್ನು ಸೋಲಿಸಿ
ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಲು 2019 ರಲ್ಲಿ ಬಿಜೆಪಿಯೇ ನೋಟಿಸ್ ಜಾರಿ ಮಾಡಿತ್ತು. ಅವರನ್ನು ಒಕ್ಕಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೂ ಬಿಜೆಪಿಯೇ. ಈಗ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದೂ ಕೂಡ ಬಿಜೆಪಿಯೇ
ಆದರೆ ನಮ್ಮ ಸರ್ಕಾರ ನೋಟಿಸ್ ವಾಪಾಸ್ ಪಡೆಯಲು ಸ್ಪಷ್ಟ ನಿರ್ದೇಶನ ನೀಡಿದೆ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಇಂಥಾದ್ದೊಂದು ಸ್ಪಷ್ಟ ನಿರ್ದೇಶನ ನೀಡದೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ