*ಬಡವರ ಏಳಿಗೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಏಕೈಕ ಪಕ್ಷ ಕಾಂಗ್ರೆಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ: ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಬಡವರ ಏಳಿಗೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕುಂದೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹೋತನಹಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಮುಂದಿನ ಆರು ದಿನಗಳ ಕಾಲ ಈ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಪಠಾಣ್ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಸಂತ ಶಿಶುನಾಳ ಶರೀಫರ, ಕನಕದಾಸರ ಪವಿತ್ರ ಭೂಮಿ ಇದಾಗಿದ್ದು, ಕುಲಕುಲವೆಂದು ಹೊಡೆದಾಡಬೇಡಿ ಎಂದು ಕನಕದಾಸರು ಹೇಳಿದರು. ಅಂಥ ಹಿರಿಯರ ಆಶಯಕ್ಕೆ ತಕ್ಕಂತೆ ಕಾಂಗ್ರೆಸ್ ಪಕ್ಷ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪಕ್ಷ, ಬಡವರ ಪಕ್ಷ. ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ದೇಶವನ್ನು ಅಭಿವೃದ್ಧಿಪಡಿಸಿದೆ. ಬಡವರಿಗಾಗಿ ರಾಜ್ಯ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಪಕ್ಷ ಕಟ್ಟಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಶಾಲೆಗಳಲ್ಲಿ ಓದಿ, ನಮ್ಮ ಸಂವಿಧಾನವನ್ನು ಓದಿ, ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಅಂತ ಬಿಜೆಪಿಗರು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ಪಕ್ಷ ಕೊಡುಗೈ ದಾನಿಗಳ ಪಕ್ಷ ಎಂದರು.
ಈ ದೇಶಕ್ಕೆ ಬಿಜೆಪಿಗರ ಕೊಡುಗೆ ಏನು? ನಾಲ್ಕು ಬಾರಿ ಗೆದ್ದಿರುವ ಬಸವರಾಜ ಬೊಮ್ಮಾಯಿ, ಶಿಗ್ಗಾವಿ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆ ಮತ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ತೆರೆದ ವಾಹನದಲ್ಲಿ ಮೆರವಣಿಗೆ
ಇದಕ್ಕೂ ಮೊದಲು ಹೋತನಹಳ್ಳಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಪ್ರಚಾರ ನಡೆಸಲಾಯಿತು. ಗ್ರಾಮದ ಮುಖ್ಯ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಮಂಕಾಳ್ ವೈದ್ಯ, ರಹೀಂ ಖಾನ್, ಶಿವಾನಂದ್ ಪಾಟೀಲ್,ಆರ್.ಬಿ.ತಿಮ್ಮಾಪುರ್, ಬೈರತಿ ಸುರೇಶ್, ಮಾಜಿ ಸಚಿವರಾದ ರಮಾನಾಥ್ ರೈ, ಪ್ರಕಾಶ್ ಹುಕ್ಕೇರಿ, ಆರ್. ಶಂಕರ್, ಎಚ್.ಎಂ.ರೇವಣ್ಣ, ಶಾಸಕಿ ನಯನ ಮೋಟಮ್ಮ, ಮಾಜಿ ಸಂಸದ ಐ.ಜಿ.ಸನದಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಚಿತ್ರ ನಟ ಸಾಧು ಕೋಕಿಲ, ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಮುಖಂಡರಾದ ಅಜಂಪೀರ್ ಖಾದ್ರಿ, ಮಂಜುನಾಥ್ ಕುನ್ನೂರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ