ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿ ರದ್ದಾಗಿದೆ ಎಂಬ ಬಿಜೆಪಿ ಶಾಸಕ ಸುನೀಲ್ ಕುಮಾರ್ ಆರೋಪಕ್ಕೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಪರಿಷ್ಕರಣೆ ಮಾಡಿದಾಗ ಬಿಪಿಎಲ್ ಅಲ್ಲದೇ ಇರೋರನ್ನು ಎಪಿಎಲ್ ಮಾಡಿದ್ದೇವೆ. ಆದರೆ ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪಡಿತರ ನೀಡಲು ಹಣದ ಕೊರತೆ ಇಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಎಪಿಎಲ್ ಕಾರ್ಡ್ ದಾರರಿಗೆ ಸಬ್ಸಿಡಿ ರೇಟ್ ಕೊಡ್ತಿದ್ದೆವು. ಹೆಚ್ಚಿನವರು ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಎಪಿಎಲ್ ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ್ದೇವೆ. ಪರಿಷ್ಕರಣೆ ಪೂರ್ಣಗೊಂಡ ಬಳಿಕ ಎಪಿಎಲ್ ನವರು ಸಬ್ಸಿಡಿ ಬೇಕು ಎಂದರೆ ಖಂಡಿತ ಕೊಡುತ್ತೇವೆ ಎಂದು ತಿಳಿಸಿದರು.
ಒಂದೇ ಒಂದು ಎಪಿಎಲ್ ಕಾರ್ಡ್ ರದ್ದಾಗಿಲ್ಲ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಕರ್ನಾಟಕದಲ್ಲಿ ಕಾರ್ಡ್ ಇದೆ. ಪರಿಷ್ಕರಣೆ ನಿಯಾಮವಳಿ ಹಾಕಿಕೊಂಡಿದ್ದೇವೆ. ಈ ಹಿಂದಿನ ಸರ್ಕಾರವೇ ಈ ನಿಯಮ ಹಾಕಿದೆ. ಸುನೀಲ್ ಕುಮಾರ್ ನನ್ನ ಬಳಿ ಕೇಳಿದರೆ ನಾನು ಹೇಳುತ್ತೇನೆ ಎಂದರು.
*ಸ್ಪಷ್ಟೀಕರಣ*
*ಎಪಿಎಲ್ ಕಾರ್ಡುಗಳ ರದ್ಧತಿಗೆ ಆಹಾರ ಇಲಾಖೆಯು ನಿರ್ದೇಶನ ನೀಡಿಲ್ಲ*
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ ಮತ್ತು ಈವರೆಗೆ ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ.
ಕೆಲವು ದಿನಪತ್ರಿಕೆಗಳಲ್ಲಿ ಇ – ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ.
ರಾಜ್ಯದಲ್ಲಿ 2024ರ ಸೆಪ್ಟೆಂಬರ್ 2ರ ವರೆಗೆ 25,13,798 ಎಪಿಎಲ್ ಕಾರ್ಡುಗಳಿದ್ದವು. ನವೆಂಬರ್ 16 ರಂದು *25,62,566* ಕಾರ್ಡುಗಳಿವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ.
*ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಸುದ್ದಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿದ್ದು, ಈ ರೀತಿಯ ಕ್ರಮವನ್ನು ಈವರೆಗೆ ಕೈಗೊಂಡಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇವೆ.*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ