Belagavi NewsBelgaum NewsKarnataka News

*ಆಧ್ಯಾತ್ಮಿಕ ಬೆಳವಣಿಗೆಗೆ ಕನಕದಾಸರ ಕೊಡುಗೆ ಅಪಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಾಸ ಸಾಹಿತ್ಯದ ಮೂಲಕ ಕನಕದಾಸರು ನೀಡಿರುವ  ಕೊಡುಗೆ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದು‌ ಮಹಾನಗರ ಪಾಲಿಕ ಉಪ ಆಯುಕ್ತರಾದ ಉದಯಕುಮಾರ ಅವರು‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ  ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ  ಸೋಮವಾರ (ನ.18) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜರುಗಿದ  ಭಕ್ತ ಶ್ರೇಷ್ಠ ಕನಕದಾಸ‌ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕದಾಸರ ಕೊಡುಗೆ ಅಪಾರವಾದುದು. ಕನಕದಾಸರ ಜಯಂತಿಯನ್ನು ಭಕ್ತಿಪೂರ್ವಕವಾಗಿ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆಯು ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ‌‌ವಹಿಸಿದ್ದ  ಶ್ರೀ ಸಿದ್ದಯೋಗಿ ಅಮರೇಶ್ವರ  ಅಪ್ಪಾಜಿ ಅವರು‌ ಮಾತನಾಡಿ, ಭಕ್ತಿ ಎನ್ನುವುದು ಆಡಂಬರವಾಗದೇ ಪ್ರಪಂಚದಲ್ಲಿ   ಪ್ರತಿಯೊಬ್ಬರೂ ಜೀವನದ  ಕಾಳಜಿ ವಹಿಸುವ ದಾಸರಾಗಿರಿ ಎಂದು ಹೇಳಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಅರಿವು ಮೂಡಿಸಲು ಯತ್ನಿಸಿ 15- 16ನೇ ಶತಮಾನದಲ್ಲಿ ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದುಹಾಕಲು ಶ್ರಮಿಸಿದರು.  ಕಾಗಿನೆಲೆಯ ಆದಿಕೇಶವರಾಯ ಅಂಕಿತದ ಮೂಲಕ ಕೀರ್ತನೆಗಳನ್ನ ರಚಿಸಿ ದಾಸಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದರು.

ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಪುರಂದರದಾಸರೊಂದಿಗೆ ಕಾಣಿಕೆ ನೀಡಿದ್ದಾರೆ. ಕನಕದಾಸರು ಮೂಲತಃ ದಂಡನಾಯಕರಾಗಿದ್ದರು. ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ.

ಕನಕದಾಸರು  ಸಮಾನತೆಯ ಸಂದೇಶಗಳನ್ನು ಹರಡುವಲ್ಲಿ ಮತ್ತು ಸಾಮಾಜಿಕ ಸಮುದಾಯವನ್ನು ಉನ್ನತೀಕರಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು. ಕನಕದಾಸರು ತಮ್ಮ ಸರಳ ಬರಹಗಳು ಮತ್ತು ರಚನೆಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದರು, ಅವರ ಸಾಹಿತ್ಯಕ ಬರಹಗಳ ಮೂಲಕ ಸಾಮಾನ್ಯರ ದೈನಂದಿನ ಚಟುವಟಿಕೆಗಳನ್ನು ಬಳಸಿಕೊಂಡು ಅವರ ಹೊಸತನವನ್ನು  ತೋರಿಸಿದರು. ಈ ಕಾರಣಕ್ಕೆ ಕನಕದಾಸರು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಕನಕದಾಸರ ಬೋಧನೆಗಳನ್ನು ಸಾಕಾರಗೊಳಿಸುವ ಮೂಲಕ ಮತ್ತು ಅವರ ಸಾಹಿತ್ಯಕ ಕೊಡುಗೆಗಳನ್ನು ಗೌರವಿಸುವ ಮೂಲಕ ಅವರ ಬೋಧನೆಗಳು ಸಾಮರಸ್ಯ ಮತ್ತು ಸಹಾನುಭೂತಿಯ ಅಸ್ತಿತ್ವದ ಕಡೆಗೆ ನಮಗೆ ಮಾರ್ಗದರ್ಶನ ನೀಡಲಿ  ಎಂದು ಶ್ರೀ. ಸಿದ್ದಯೋಗಿ ಅಮರೇಶ್ವರ  ಅಪ್ಪಾಜಿ ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ ಅಧಿಕಾರಿ  ಅಶೋಕ ಸದಲಗಿ, ಸೇಲ್ ಟ್ಯಾಕ್ಸ ಅಸಿಸ್ಟಂಟ್ ಕಮಿಷನರ ಸುಂಟೆ,

ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಉಪನೀರ್ದೇಶಕಿ ವಿದ್ಯಾವತಿ ಭಂಜತ್ರಿ, ಮಾಜಿ ಮಹಾಪೌರ ಯಲ್ಲಪ್ಪಾ ಕುರುಬರ ಗಣ್ಯರುಗಳಾದ ಪ್ರಕಾಶ ಪೂಜೇರಿ,  ರೇಖಾ ದಳವಾಯಿ,  ಎಸ್, ಟಿ ಸಾಬನ್ನವರ, ಡಾ. ಪ್ರತಾಪ ಕುಮಾರ ಸೇರಿದಂತೆ ಸಮಾಜದ‌ ಮುಖಂಡರು ಮತ್ತು ಸಾರ್ವಜನಿಕರು  ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

ಭಾವಚಿತ್ರದ ಭವ್ಯ ಮೆರವಣಿಗೆ:

ಕಾರ್ಯಕ್ರಮಕ್ಕೂ‌ ಮುನ್ನ ನಗರದ ಕನಕ ವೃತ್ತದಿಂದ ಪ್ರಾರಂಭವಾದ ಆಕರ್ಷಕ‌ ಮೆರವಣಿಗೆಗೆ ಶಾಸಕರಾದ ಆಸೀಫ(ರಾಜು) ಸೇಠ ಅವರು ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಹಾಪೌರರಾದ‌ಸವಿತಾ ಕಾಂಬಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ ಸೇರಿದಂತೆ ಸಮುದಾಯದ ಗಣ್ಯರು‌, ಮುಖಂಡರು ಸಾರ್ವಜನಿಕರು ಉಪಸ್ಥತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button