ಪ್ರಗತಿವಾಹಿನಿ ಸುದ್ದಿ : ಆಂಟಿ ನಕ್ಸಲ್ ಫೋರ್ಸ್ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯ ವೇಳೆ ನಕ್ಸಲರು ಎದುರಾದ ಪರಿಣಾಮ ಗುಂಡಿನ ಚಕಮಕಿ ನಡೆದ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ನಡೆದಿದೆ.
ಈ ಎನ್ಕೌಂಟರ್ ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎಎನ್‌ಎಫ್ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಸೋಮವಾರ ರಾತ್ರಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಚಿಕ್ಕಮಂಗಳೂರು, ಉಡುಪಿ ಜಿಲ್ಲೆಯ ಗಡಿಯ ಕಾಡುಗಳಲ್ಲಿ ಕೂಂಬಿಂಗ್ ಆಪರೇಷನ್ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮೂಲತಃ ಕಬ್ಬಿನಾಲೆಯವನಾಗಿದ್ದ ವಿಕ್ರಂ ಗೌಡ ನಕ್ಸಲ್ ವಿಚಾರಧಾರೆಗಳಿಂದ ಪ್ರಭಾವಿತನಾಗಿ ನಕ್ಸಲ್ ತಂಡ ಸೇರಿದ್ದ. ಅಷ್ಟೇ ಅಲ್ಲದೇ ಈ ಭಾಗದ ಯುವಕ ಯುವತಿಯರನ್ನು ಪ್ರಚೋದಿಸಿ ನಕ್ಸಲರ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದ. ಮಲೆನಾಡಿನ ಕಾಡುಗಳಲ್ಲಿ ನಕ್ಸಲರ ಉಪಟಳ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಎಎನ್‌ಎಫ್ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ಹಮ್ಮಿಕೊಂಡಿತ್ತು.
ವಿವರ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಗೆ ಬಲಿ
ನಕ್ಸಲ್ ನಾಯಕ ಹೆಬ್ರಿ ಸಮೀಪದ ಕಬ್ಬಿನಾಲೆ ಮೂಲದ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ದಳ (ಎಎನ್ಎಫ್) ಪೊಲೀಸರು ಸೋಮವಾರ ರಾತ್ರಿ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾರ್ಕಳ, ಹೆಬ್ರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ತೀವ್ರಗೊಳಿಸಿತ್ತು.
ಹೆಬ್ರಿ ಪರಿಸರ ಕಬ್ಬಿನಾಲೆ, ಪೀತೆಬೈಲು ಪರಿಸರದಲ್ಲಿ ನಾಲ್ವರು ನಕ್ಸಲರು ಓಡಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಎಎನ್ಎಫ್ ಕಾರ್ಯಾಚರಣೆ ನಡೆಸಿದ್ದು, ಈನಡುವೆ ಎಎನ್ಎಫ್ ಮತ್ತು ನಕ್ಸಲರ ನಡುವೆ ಸೋಮವಾರ ರಾತ್ರಿ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದು
ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಗುಂಡು ತಗುಲಿ ಮೃತಪಟ್ಟಿದ್ದಾನೆ. ಇನ್ನೂ ಮೂವರು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ.
ಕಾರ್ಕಳ, ಹೆಬ್ರಿ ಸಹಿತ ವಿವಿಧ ಪಶ್ಚಿಮಘಟ್ಟದ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.
ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಮೃತ ವಿಕ್ರಂ ಗೌಡ ನೇತ್ರಾವತಿ ದಳದ ಮುಖ್ಯಸ್ಥನಾಗಿದ್ದ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನೆಲೆಯಲ್ಲಿ ಗುಪ್ತ ಸಭೆ ನಡೆಸಿದ್ದ ವರದಿಯಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ