ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಬೆಳಗಾವಿಯ ಚಿಕಲಿ ಗ್ರಾಮದ ಗೋಕುಲಧಾಮ್ ನಲ್ಲಿ ಸಾಮಾಜಿಕ ಹಾಗೂ ಕೃಷಿ ಆಧಾರಿತ ಒಂದು ದಿನದ ಚಟುವಟಿಕಾ ಕಾರ್ಯಾಗಾರ ಹಮ್ಮಿಕೊಂಡಿದ್ದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಸೇರಿದಂತೆ ಹನ್ನೆರಡು ಅಧ್ಯಾಪಕ ಸದಸ್ಯರೊಂದಿಗೆ ನೂರ ಇಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಒಂದು ದಿನದ ಕಾರ್ಯಾಗಾರದಲ್ಲಿ ಕಾಡಿನಲ್ಲಿ ನೀರು ಸರಬರಾಜು ಪೈಪ್ ಲೈನ್ ಹಾಕಲು ಸಮೀಕ್ಷೆ, ಆವರಣವನ್ನು ಸ್ವಚ್ಛ ಗೊಳಿಸುವುದು ಮತ್ತು ನಿರ್ವಹಿಸುವುದು, ರಿಜಿಸ್ಟರ್ ನಿರ್ವಹಣೆ ಹಾಗೂ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸುವುದು, ತರಕಾರಿ ಕೃಷಿಗಾಗಿ ಮಣ್ಣಿನ ಫಲವತತ್ತೆಯನ್ನು ಹೆಚ್ಚಿಸುವುದು ಇಷ್ಟೇ ಅಲ್ಲದೆ ಇಂತಹ ಅನೇಕ ಸಾಮಾಜಿಕ ಚಟುವಟಿಕೆಗಳು ಸೇರಿವೆ.
ಈ ರೀತಿಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಪರಿಸರ, ಪರಿಸರ ವಿಜ್ಞಾನ ಮತ್ತು ಸಾಮಾಜಿಕ ಸಂರಕ್ಷಣೆಯ ಪ್ರಜ್ಞೆಯನ್ನು ಬೆಳೆಸುತ್ತವೆ. ಹಾಗೆಯೇ ಸಾಮಾಜಿಕ ನಡವಳಿಕೆ, ಸರಿಯಾದ ಸಮನ್ವಯ ಮತ್ತು ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಸುಧಾರಿಸುತ್ತವೆ.
ಈ ರೀತಿಯ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದ್ದಕ್ಕೆ ಕೆ ಎಲ್ ಎಸ್ ಚೇರಮನ್ ಎಂ. ಆರ್. ಕುಲಕರ್ಣಿ, ಜಿ ಐ ಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕರ್ಣಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ