Belagavi NewsBelgaum NewsKannada NewsKarnataka News

*ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಹುಲಿ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿಯೊಂದು ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದೆ.

ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯದಲ್ಲಿದ್ದ 13 ವರ್ಷದ “ಶೌರ್ಯ” ಎಂಬ ಹೆಸರಿನ ಗಂಡು ಹುಲಿ ಮೃತಪಟ್ಟಿದೆ. Mycoplasma, Cytauxzonosis ಮತ್ತು Babesiosis ಎಂಬ ವಿರಳ ರೋಗದಿಂದ ಬಳಲುತ್ತಿತ್ತು. ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಮೃಗಾಲಯದಲ್ಲೆ ಶೌರ್ಯನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಿಗ್ಗೆ 9.40ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಷ್ಟು ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಕೇಂದ್ರ ಸರ್ಕಾರದ ನಿಯಮನಾಸಾರ ಗೌರವಪೂರ್ವಕವಾಗಿ ಮೃಗಾಲಯದ ಆವರಣದಲ್ಲೆ ಶೌರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ಮಾರಿಯಾ ಕ್ರಿಷ್ಟು ರಾಜಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸುರ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮೃಗಾಲಯದ ವೈದ್ಯ ಡಾ.ನಾಗೇಶ ಹುಯಿಲಗೋಳ, ಪಶುವೈದ್ಯಕೀಯ ಇಲಾಖೆಯ ವೈದ್ಯ ಡಾ. ಪ್ರಶಾಂತ ಕಾಂಬಳೆ ಮತ್ತು ಮೃಗಾಲಯದ ಸಿಬ್ಬಂದಿ ಹಾಜರಿದ್ದರು.

ಕಳೆದ ವರ್ಷವೂ ಇದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಶೌರ್ಯ ಬಳಲುತ್ತಿದ್ದ. ಆ ವೇಳೆ ಚಿಕಿತ್ಸೆ ನೀಡಿದಾಗ ಗುಣಮುಖವಾಗಿದ್ದ. ಆದರೆ, ಈಗ ಮತ್ತೆ ಸಮಸ್ಯೆ ಕಾಣಿಸಿಕೊಂಡಿತ್ತು. 21 ದಿನ ನಿರಂತರವಾಗಿ ಮೃಗಾಲಯದ ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮಾಹಿತಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button