ಪ್ರಗತಿವಾಹಿನಿ ಸುದ್ದಿ : ಗೂಗಲ್ ಮ್ಯಾಪ್ ನ್ಯಾವಿಗೇಶನ್ ಆಧರಿಸಿ ಕಾರು ಚಲಾಯಿಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಕಾರೊಂದು ನದಿಗೆ ಉರುಳಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರು ಚಲಾಯಿಸುವ ವೇಳೆ ಜಿಪಿಎಸ್ ಕೈಕೊಟ್ಟಿದ್ದರಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು ಕಾರು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ.
ಮಂಜು ಮುಸುಕಿನ ವಾತಾವರಣದಲ್ಲಿ ದಾರಿ ಕಾಣದೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರು ನೇರವಾಗಿ ರಾಮಗಂಗಾ ನದಿಗೆ ಬಿದ್ದಿದೆ. ಮೂವರು ಮಂದಿ ಪ್ರಯಾಣಿಕರು ತೆರಳುತ್ತಿದ್ದ ಕಾರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿತ್ತು. ಜಿಪಿಎಸ್ ನ್ಯಾವಿಗೇಷನ್ ಅನ್ನು ಅನುಸರಿಸುತ್ತಾ ಸಾಗಿದ ಕಾರ್ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿಂದ ನೇರವಾಗಿ ನದಿ ನೀರಿಗೆ ಬಿದ್ದಿದೆ. ಹಿಂದೆ ಈ ಪ್ರದೇಶದಲ್ಲಿ ಪ್ರವಾಹದ ಸಂದರ್ಭದಲ್ಲಿ ಸೇತುವೆಯ ಮುಂಭಾಗದ ಭಾಗವು ನದಿಗೆ ಕುಸಿದಿದೆ ಎಂಬುದನ್ನು ಜಿಪಿಎಸ್ ನ್ಯಾವಿಗೇಷನ್ ನವೀಕರಿಸದ ಕಾರಣ ಈ ಅವಘಡ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ಸುರಕ್ಷತಾ ಅಡೆತಡೆಗಳು ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಕೂಡ ಅಪಾಯಕ್ಕೆ ಕಾರಣವಾಗಿದೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ