*ನರ್ಸ್ ವೇಷದಲ್ಲಿ ಬಂದು ಒಂದು ದಿನದ ಮಗು ಕಿಡ್ನ್ಯಾಪ್: ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಶರಣಪ್ರಕಾಶ್ ಪಾಟೀಲ್*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿದ್ದ ನವಜಾತ ಶಿಶುಗಳ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ನರ್ಸ್ ವೇಷ, ಸಿಬ್ಬಂದಿಗಳ ವೇಷದಲ್ಲಿ ಬಂದು ಮಕ್ಕಳನ್ನು ಅಪಹರಿಸಿ ಪರಾರಿಯಾಗುತ್ತಿರುವ ಪ್ರಕರಣಗಳು ಒಂದರ ಮೇಲೊಂದರಂತೆ ವರದಿಯಾಗುತ್ತಲೇ ಇದೆ. ಇದೀಗ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ದಿನದ ಶಿಶುವನ್ನು ಮಹಿಳೆಯರಿಬ್ಬರು ಕಿಡ್ನ್ಯಾಪ್ ಮಾಡಿದ್ದಾರೆ.
ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕಸ್ತೂರಿ ಎಂಬ ಗರ್ಭಿಣಿ ಮೊನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಶಿಶುವನ್ನು ರಕ್ತ ತಪಾಸಣೆ ನಡೆಸಬೇಕು ಎಂದು ಕರೆದೊಯ್ದಿದ್ದಾರೆ. ಈ ವೇಳೆ ಶಿಶುವಿನ ತಾಯಿ ಕಸ್ತೂರಿಯ ಸಂಬಂಧಿ ಮಹಿಳೆಯೊಬ್ಬರು ಮಗುವಿನ ಜೊತೆ ಇದರು. ಶಿಶುವನ್ನು ತಮ್ಮ ಕೈಗೆ ಕೊಡಿ ನೀವು ರಕ್ತ ತಪಾಸಣೆ ನಡೆಸಿ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ನರ್ಸ್ ವೇಶದಲ್ಲಿದ್ದ ಇಬ್ಬರು ಮಹಿಳೆಯರು ಶಿಶುವಿನ ಸಮೇತ ಪರಾರಿಯಾಗಿದ್ದಾರೆ.
ನವಜಾತ ಶಿಶುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಪತ್ರೆಯಲ್ಲಿನ ಭದ್ರತಾ ಲೋಪ, ಸಿಬ್ಬಂದಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮಗುವಿನ ಪೋಷಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ತಾಯಿ ಕಸ್ತೂರಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ನರ್ಸ್ ಗಳು ಹಾಗೂ ನವಜಾತ ಶಿಶುವಿನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ