Politics

*ವಿವಾದದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಚಂದ್ರಶೇಖರನಾಥ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು ಎಂಬ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸಚಿವರು, ಶಾಸಕರು, ರಾಜಕೀಯ ಮುಖಂಡರು ಸ್ವಾಮೀಜಿ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚತ್ತ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಚಂದ್ರಶೇಖರನಾಥ ಸ್ವಾಮೀಜಿ, ಫ್ರೀಡಂ ಪಾರ್ಕ್ ನಲ್ಲಿ ನಡೆದ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಸಮಾವೇಶದಲ್ಲಿ ನಾನು ಹೇಳಿದ್ದ ಹೇಳಿಕೆ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ನನ್ನ ಹೇಳಿಕೆ ಬಗ್ಗೆ ಈ ಮೂಲಕ ಸ್ಪಷ್ಟೀಕರಣ ನೀಡುತ್ತಿದ್ದೇನೆ.

ಇತ್ತೀಚಿನ ದಿನಗಳಲ್ಲಿ ವಕ್ಫ್ ಮಂಡಳಿ, ನೂರಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತಾಪಿ ಜನರನ್ನು ಒಕ್ಕಲೆಬ್ಬಿಸಿ ಅವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿವೆ. ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಸಂಸ್ಥೆಯ ನಡೆ ಒಪ್ಪಲಾಗದು. ವಕ್ಫ್ ಮಂಡಳಿಯವರು ಹೊಂದಿರುವ ಜಮೀನು ಯಾವ ರೀತಿ ಅವರಿಗೆ ಬಂದಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ನಿಖರ ಮಾಹಿತಿ ನೀಡಲಿ. ನಿಖರ ಮಾಹಿತಿ ನೀಡಿದರೆ ಆ ಜಮೀನು ಅವರು ಉಳಿಸಿಕೊಳ್ಳಲು ನಮಗೆ ಅಭ್ಯಂತರವಿಲ್ಲ. ಆದರೆ ತಲತಲಾಂತರಗಳಿಂದ ಕೃಷಿ ಮಾಡುತ್ತಿರುವ ನಮ್ಮ ರೈತರನ್ನು ವ್ವಕ್ಫ್ ಮಂಡಳಿಯ ಹೆಸರು ಹೇಳಿ ಜಾಗ ಖಾಲಿ ಮಾಡಿಸುವುದನ್ನು ನಾವು ಒಪ್ಪಲ್ಲ ಎಂದು ಹೇಳಿದ್ದಾರೆ.

ಮುಸಲ್ಮಾನರಿಗೆ ಮತದಾನದ ಹಕ್ಕು ರದ್ದುಪಡಿಸಬೇಕು ಎಂಬ ನನ್ನ ಹೇಳಿಕೆ ಬಾಯಿ ತಪ್ಪಿನಿಂದ ಬಂದಿದೆ. ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನಿನ್ನೆ ದಿನ ನಾವು ಬಾಯಿ ತಪ್ಪಿ ನೀಡಿರುವ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button