Kannada NewsKarnataka News

ಕಾಮಗಾರಿ ಡುಪ್ಲಿಕೇಟ್ ಆಗದಂತೆ ಎಚ್ಚರಿಕೆ ವಹಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಕಾಲನಿ ಕಾಮಗಾರಿಗಳು ಮತ್ತು ಎಸ್.ಸಿ.ಪಿ/ಟಿ.ಎಸ್.ಪಿ ಕಾಮಗಾರಿಗಳು ಡುಪ್ಲಿಕೇಟ್ ಅಥವಾ ಓವರ್ ಲ್ಯಾಪ್ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯಕ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಅ.19) ನಡೆದ ಸಮಾಜ ಕಲ್ಯಾಣ ಇಲಾಖೆ ಯೋಜನೆಗಳು ಮತ್ತು ವಿವಿಧ ಇಲಾಖೆಗಳ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಗತಿ ಕಾಲನಿ ಕಾಮಗಾರಿಗಳಿಗೆ ಈ ವರ್ಷ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಆದ್ದರಿಂದ ಈಗಾಗಲೇ ಅನುಮೋದನೆ ನೀಡಲಾಗಿರುವ ಕೆಲಸವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅದೇ ರೀತಿ  ಅಂಬೇಡ್ಕರ್, ವಾಲ್ಮೀಕಿ ಮತ್ತಿತರ ಭವನಗಳ ನಿರ್ಮಾಣ ಕಾರ್ಯ ಚುರುಕುಗೊಳಿಸಬೇಕು.
ಎಲ್ಲ ಭವನಗಳು ಸರ್ಕಾರದ ಆಸ್ತಿ ಆಗಿರುವುದರಿಂದ ಲಭ್ಯತೆ ಆಧರಿಸಿ ಇತರೆ ಯಾವುದೇ ಸಮುದಾಯದವರು ಅದನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಜಿ.ಕುಮಾರ ನಾಯಕ ಅಧಿಕಾರಿಗಳಿಗೆ ತಿಳಿಸಿದರು.
ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ನಿರಂತರ ಪ್ರಗತಿಪರಿಶೀಲನೆ ಅಗತ್ಯವಿದೆ.
ಲೋಕೋಪಯೋಗಿ ಇಲಾಖೆಯ ರಸ್ತೆಗಳ ನಿರ್ಮಾಣಕ್ಕೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದ ಬಳಕೆ ಮಾಡುವಂತಿಲ್ಲ. ಅನುದಾನ ನಿಗದಿಪಡಿಸಿದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಯೋಟ್ಯಾಗ್ ಅಥವಾ ವಿವಿಧ ಇಲಾಖೆಗಳ ಯೋಜನೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದರೆ ಕಾಮಗಾರಿಗಳ ಡುಪ್ಲಿಕೇಟ್ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.
ನಿಗದಿಪಡಿಸಿದ ಉದ್ದೇಶಕ್ಕೇ ಅನುದಾನ ಬಳಸಿಕೊಳ್ಳಲು ಹಾಗೂ ಬೇರೆ ಬೇರೆ ಯೋಜನೆ ಅಡಿ ಒಂದೇ ಕಾಮಗಾರಿ ಕೈಗೊಳ್ಳುವುದನ್ನು ತಡೆಗಟ್ಟಲು ಇದರಿಂದ ಅನುಕೂಲವಾಗಲಿದೆ ಎಂದರು.

ವಸತಿನಿಲಯ ಪ್ರಸ್ತಾವ ಸಲ್ಲಿಸಲು ಸೂಚನೆ:

ಸಮಾಜಕಲ್ಯಾಣ, ಪರಿಶಿಷ್ಟ ವರ್ಗಗಳ ಹಾಗೂ ವಿವಿಧ ಇಲಾಖೆಗಳ ವಸತಿನಿಲಯಗಳನ್ನು ಸ್ಥಾಪಿಸುವಾಗ ಮಕ್ಕಳ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ರಸ್ತೆ, ನೀರು ಮತ್ತಿತರ ಸೂಕ್ತ ಮೂಲಸೌಕರ್ಯಗಳನ್ನು ಹೊಂದಿರುವ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸಬೇಕು ಜಿ.ಕುಮಾರ ನಾಯಕ ಸೂಚನೆ ನೀಡಿದರು.
ರಸ್ತೆ ಸಂಪರ್ಕ, ನೀರಿನ ಸೌಲಭ್ಯ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಪರಿಗಣಿಸಿ ಶೈಕ್ಣಣಿಕ ಸಂಸ್ಥೆಗಳ ಸಮೀಪ ಇರುವ ಜಾಗೆಯನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಕ್ಕಳ ಸಂಖ್ಯೆ ಆಧರಿಸಿ ಸೂಕ್ತ ಅಂಕಿ-ಅಂಶಗಳ ಸಮೇತ ಪ್ರಸ್ತಾವ ಸಲ್ಲಿಸಿದರೆ ಹೆಚ್ಚಿನ ವಸತಿನಿಲಯಗಳ ಮಂಜೂರಾತಿಗೆ ಸುಲಭವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಅಥವಾ ಹೆಚ್ಚು ಆದಾಗ ಅನಿವಾರ್ಯತೆ ಇದ್ದರೆ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದುಕೊಳ್ಳಬಹುದು.
ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನೂ ಹೆಚ್ಚಿನ ವಸತಿನಿಲಯಗಳ ಸ್ಥಾಪನೆಗೆ ಮಂಜೂರಾತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಯಾವುದೇ ಕಾಮಗಾರಿಗೆ ಸಂಬಂಧಿಸಿದಂತೆ ಶಾಸಕರು ಪ್ರಸ್ತಾವ ಸಲ್ಲಿಸಿದಾಗ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಆದರ್ಶ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲೆಯ 20 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮ ಮಟ್ಟದಲ್ಲಿ ಕ್ರಿಯಾಯೋಜನೆ ರೂಪಿಸಿಕೊಂಡು ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ತಿಳಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ, ಪಂಚಾಯತರಾಜ್ ಎಂಜಿನಿಯರಿಂಗ್, ನೀರಾವರಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ ಅವರು, ಕಾಲಮಿತಿಯಲ್ಲಿ ಗುರಿಯನ್ನು ಸಾಧಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ಪ್ರಕಾಶ್ ಹರಗಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button