ಯುರೋಪಿಯನ್ ಒಕ್ಕೂಟಕ್ಕಿಂತ ದುಪ್ಪಟ್ಟು ಜನಸಂಖ್ಯೆಗೆ ಪಡಿತರ ಪೂರೈಕೆ: ಪ್ರಲ್ಹಾದ ಜೋಶಿ
ಪ್ರಗತಿವಾಹಿನಿ ಸುದ್ದಿ: ಭಾರತ, ಯುರೋಪಿಯನ್ ಒಕ್ಕೂಟಕ್ಕಿಂತ ದುಪ್ಪಟ್ಟು ಜನಸಂಖ್ಯೆಗೆ ಉಚಿತ ಪಡಿತರ ಪೂರೈಸುತ್ತಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ಇಂದು “ಅನ್ನ ಚಕ್ರ” ಹೊಸ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿ, ಭಾರತ ಪ್ರತಿ ತಿಂಗಳು 2.20 ಲಕ್ಷ ಕೋಟಿ ಮೌಲ್ಯದ ಉಚಿತ ಆಹಾರ ಧಾನ್ಯ ನೀಡುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ದೇಶದ 80 ಕೋಟಿ ಬಡವರಿಗೆ 2028ರವರೆಗೆ ಉಚಿತ ಪಡಿತರ ಯೋಜನೆ ವಿಸ್ತರಿಸಿದೆ. ಅಲ್ಲದೇ, ಪ್ರಸ್ತುತದಲ್ಲಿ ಕೆಲ ಫಲಾನುಭವಿಗಳು ₹ 1- 3 ಕೆಜಿ ಅತ್ಯಲ್ಪ ಬೆಲೆಯಲ್ಲಿ ಪ್ರತಿ ತಿಂಗಳು ಪಡಿತರ ಧಾನ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.
3 ಲಕ್ಷ ಕೋಟಿ ಮೌಲ್ಯದ ಸೋರಿಕೆ ತಡೆ: PDS ನಲ್ಲಿ ಡಿಜಿಟಲೀಕರಣದಿಂದ ಭ್ರಷ್ಟಾಚಾರ ನಿರ್ಮೂಲನೆ ಜತೆಗೆ ₹ 3 ಲಕ್ಷ ಕೋಟಿ ಮೌಲ್ಯದ ಸೋರಿಕೆಯನ್ನು ತಡೆಯಲಾಗುತ್ತಿದೆ ಎಂದು ಹೇಳಿದರು ಸಚಿವ ಜೋಶಿ.
ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ನಾವಿಂದು ಪ್ರತಿ ಕ್ಷೇತ್ರ, ಹಂತದಲ್ಲೂ ಭ್ರಷ್ಟಾಚಾರ ನಿಗ್ರಹಕ್ಕಾಗಿ ಡಿಜಿಟಲ್ ಗೆ ಪರಿವರ್ತನೆ ಹೊಂದುತ್ತಿದ್ದೇವೆ. ಇದರಿಂದ ಕಾರ್ಯದಕ್ಷತೆ ಹೆಚ್ಚುವುದಲ್ಲದೆ, ಸೋರಿಕೆ ಮತ್ತು ಸಮಯದ ಉಳಿತಾಯವಾಗುತ್ತದೆ. ತ್ವರಿತ ಕಾರ್ಯಾಚರಣೆ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಅನ್ನ ಚಕ್ರದಿಂದ ದಕ್ಷತೆ:
“ಅನ್ನ ಚಕ್ರ” ಪೋರ್ಟಲ್ ಮೂಲಕ ಆಹಾರ ಇಲಾಖೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆದಿದೆ. ಸಾರಿಗೆ ವೆಚ್ಚ ಮತ್ತು ಸಮಯ ಉಳಿತಾಯವಾಗಲಿದೆ. ಆಹಾರ ಇಲಾಖೆ ದಕ್ಷತೆ ಹೆಚ್ಚಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿವರಿಸಿದರು.
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ NDA ಸರ್ಕಾರದ 3ನೇ ಅವಧಿಯ ಮೊದಲ 100 ದಿನಗಳಲ್ಲಿ 4 ಕೇಂದ್ರೀಕೃತ ಕ್ಷೇತ್ರಗಳಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಲು ಪ್ರಯತ್ನಿಸಿದೆ ಎಂದರು.
ತಂತ್ರಜ್ಞಾನದಿಂದ ಬಲವರ್ಧನೆ: ಆಹಾರ ಇಲಾಖೆ ಕಾರ್ಯಾಚರಣೆಗಳ ಡಿಜಿಟಲೀಕರಣ, ಸಂಗ್ರಹಣೆ ಮತ್ತು ಲಾಜಿಸ್ಟಿಕ್ಸ್‌ನ ಆಧುನೀಕರಣ, ನ್ಯಾಯಬೆಲೆ ಅಂಗಡಿಗಳು (FPS) ಮತ್ತು ಇಲಾಖೆ ಅಡಿಯಲ್ಲಿ ಬರುವ ಸಂಸ್ಥೆಗಳ ಬಲವರ್ಧನೆಗೆ ತಂತ್ರಜ್ಞಾನ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಹಾರ ಭದ್ರತಾ ಯೋಜನೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಏಪ್ರಿಲ್ 2020ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕೊನೆಯದಾಗಿ ಫೆಬ್ರವರಿ 2023 ರಲ್ಲಿ ವಿಸ್ತರಿಸಲಾಯಿತು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ