ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆಗೈದು ಚರಂಡಿಯಲ್ಲಿ ಬಿಸಾಡಿ ಎಸ್ಕೆಪ್ ಆಗಿದ್ದ ಖಾತರ್ನಾಕ್ ಗಂಡನನ್ನ ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಆರೋಪಿ 39 ವರ್ಷದ ಮೊಹಮ್ಮದ್ ನಾಸಿಮ್ ಎಂಬಾತನನ್ನು ಬಿಹಾರದ ಮುಜಾಫರ್ಪುರದಲ್ಲಿ ಬಂಧಿಸಲಾಗಿದೆ. ನವೆಂಬರ್ 14 ರಂದು ಸರ್ಜಾಪುರ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿತ್ತು.
ನಾಸಿಮ್ ತನ್ನ ಎರಡನೇ ಪತ್ನಿ 22 ವರ್ಷದ ಖಾತುನ್ ಜೊತೆ ಸಣ್ಣಪುಟ್ಟ ವಿಷಯಗಳಿಗೆ ಆಗಾಗ ಪರಸ್ಪರ ಜಗಳವಾಡುತ್ತಿದ್ದ. ಆತ ತನ್ನ ಹೆಂಡತಿಯನ್ನು ಅನುಮಾನಿಸಿದ್ದನು ಮತ್ತು ಅವರ ನಡುವಿನ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಅವನು ಅವಳನ್ನು ಸಾಯಿಸಲು ನಿರ್ಧರಿಸಿದ್ದಾನೆ. ಆಕೆಯನ್ನು ಕತ್ತು ಹಿಸುಕಿ ಕೊಂದ ಬಳಿಕ ಆಕೆಯ ಕೈಕಾಲುಗಳನ್ನು ತಂತಿಯಿಂದ ಕಟ್ಟಿ ಶವವನ್ನು ಚರಂಡಿಗೆ ಎಸೆದಿದ್ದಾನೆ.
ಈ ಪ್ರದೇಶದಲ್ಲಿ ಚರಂಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ವಿಚಾರವನ್ನ ಪೊಲೀಸರಿಗೆ ಮುಟ್ಟಿಸಿದ್ದರು. ಮಹಿಳೆಯ ಕೊಳೆತ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ವಿಚಾರಣೆ ವೇಳೆ ಶವ ಪತ್ತೆಯಾದ ಬಳಿಕ ಮಹಿಳೆಯ ಪತಿ ನಾಪತ್ತೆಯಾಗಿದ್ದು, ಆತ ತನ್ನ ಆರು ಮಕ್ಕಳೊಂದಿಗೆ ಸ್ಥಳದಿಂದ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ನಾಸಿಮ್ಗೆ ಮೊದಲ ಮದುವೆಯಿಂದ ನಾಲ್ಕು ಮಕ್ಕಳು ಮತ್ತು ಖಾತುನ್ ಅವರ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. ಇದೀಗ 15 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಕೊಲೆ ಆರೋಪಿ ನಾಸಿಮ್ ನನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ