Kannada NewsKarnataka News

ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಮಳೆಯ ಮಧ್ಯೆಯೂ ಅದ್ಧೂರಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಸ್ವಾತಂತ್ರ್ಯೋತ್ಸವದ ಬೆಳ್ಳಿಚುಕ್ಕಿ ನಾಡಾದ ಚನ್ನಮ್ಮನ ಕಿತ್ತೂರು ಉತ್ಸವ-೨೦೧೯ ಹಿನ್ನೆಲೆಯಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿ ಕಲಾವಾಹಿನಿ ಮೆರವಣಿಗೆ ಹಾಗೂ ವಸ್ತಪ್ರದರ್ಶನಕ್ಕೆ ಬುಧವಾರ(ಅ.೨೩) ಅದ್ಧೂರಿ ಚಾಲನೆ ನೀಡಲಾಯಿತು.
ಬೈಲಹೊಂಗಲದಲ್ಲಿ ಇರುವ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭಗೊಂಡ ಕಿತ್ತೂರು ಚನ್ನಮ್ಮ ವಿಜಯಜ್ಯೋತಿಯನ್ನು ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳುವ ಮೂಲಕ ಮೂರು ದಿನಗಳ ಉತ್ಸವಕ್ಕೆ ಚಾಲನೆ ದೊರೆಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ವಿಜಯಜ್ಯೋತಿಗೆ ಪೂಜೆ ನೆರವೇರಿಸಿದ ಬಳಿಕ ಕಿತ್ತೂರಿನ ಸಂಸ್ಥಾನದ ಧ್ವಜಾರೋಹಣವನ್ನು ನೆರವೇರಿಸಿದರು.
ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ  ಶಶಿಕಲಾ ಜೊಲ್ಲೆ ಮತ್ತಿತರ ಗಣ್ಯರು ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ವಿವಿಧ ಕಲಾತಂಡಗಳನ್ನು ಒಳಗೊಂಡ ಜಾನಪದ ಕಲಾವಾಹಿನಿ ಮೆರವಣಿಗೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರಿನ ಮಹಾದ್ವಾರದ ಎರಡೂ ಬದಿಯಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಕಂಚಿನ ಪುತ್ಥಳಿಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ  ಮತ್ತಿತರರು ಉಪಸ್ಥಿತರಿದ್ದರು.
ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭಗೊಂಡ ಕಲಾವಾಹಿನಿ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ನಾಸಿಕ ಡೋಲು, ಡೊಳ್ಳು ಕುಣಿತ, ವೀರಗಾಸೆ, ಶಿವಮೊಗ್ಗ ಜಿಲ್ಲೆಯ ಮಹಿಳಾ ಡೊಳ್ಳುಕುಣಿತ, ತಾಸೆ ವಾದನ, ಗೊಂಬೆ ಕುಣಿತ, ಜಗ್ಗಲಿಗೆ, ಹಲಗೆ ವಾದನ, ಜಾಂಜ್ ಪಥಕ್, ಕೋಲಾಟ, ನಂದಿಕೋಲು, ವಿವಿಅದ ವೇಷಧಾರಿಗಳು ಮತ್ತಿತರ ಜಾನಪದ ಕಲಾತಂಡಗಳ ನೂರಾರು ಕಲಾವಿದರು ನಾಡಿನ ಕಲಾವೈಭವವನ್ನು ಅನಾವರಣಗೊಳಿಸಿದರು.
ಕುಂಭಹೊತ್ತ ನೂರಾರು ಮಹಿಳೆಯರು ಕಲಾವಾಹಿನಿ ಜತೆಗೆ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಮೆರಗು ತಂದರು.

ವಸ್ತುಪ್ರದರ್ಶನ ಉದ್ಘಾಟನೆ:

ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸ್ಥಾಪಿಸಿರುವ ಪ್ರದರ್ಶನ ಮಳಿಗೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಉದ್ಘಾಟಿಸಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೆಬ್ ಜೊಲ್ಲೆ, ಶಾಸಕ ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಗಮನಸೆಳೆದ ವಾರ್ತಾ ಇಲಾಖೆಯ ಮಳಿಗೆ 

 ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆದಿರುವ ಸರ್ಕಾರವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕಿತ್ತೂರು ಉತ್ಸವದಲ್ಲಿ ಸ್ಥಾಪಿಸಲಾಗಿರುವ ವಿಶೇಷ ವಸ್ತುಪ್ರದರ್ಶನ ಮಳಿಗೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಬುಧವಾರ(ಅ.೨೩) ಉದ್ಘಾಟಿಸಿದರು.
“ನಮ್ಮ ಘನ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಉನ್ನತ ಕಾರ್ಯ ವಾರ್ತಾ ಇಲಾಖೆ ಮುಖಾಂತರ ಮಾಡುತ್ತಿರುವುದು ಶ್ಲಾಘನೀಯ” ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಮಳಿಗೆಯ ವೀಕ್ಷಕರ ಪುಸ್ತಕದಲ್ಲಿ ಬರೆಯುವ ಮೂಲಕ ವಸ್ತುಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರು, ಮಳಿಗೆಯಲ್ಲಿ ಪ್ರದರ್ಶಿಸಲಾಗಿರುವ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೆಬ್ ಜೊಲ್ಲೆ, ಶಾಸಕ ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸರ್ಕಾರವು ಕೈಗೊಂಡ ಪರಿಹಾರ ಕಾರ್ಯಗಳು, ನೇಕಾರರು-ಮೀನುಗಾರರ ಸಾಲಮನ್ನಾ; ಆರೋಗ್ಯ ಇಲಾಖೆಯ ಯೋಜನೆಗಳು, ಡೆಂಗ್ಯು ಮತ್ತು ಚಿಕನ್ ಗುನ್ಯಾ ನಿಯಂತ್ರಣ ಕ್ರಮಗಳು; ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜತೆಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ನಾಲ್ಕು ಸಾವಿರ ರೂಪಾಯಿ ಹೆಚ್ಚುವರಿ ನೆರವು; ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿ; ಪ್ರವಾಸೋದ್ಯಮಕ್ಕೆ ನೀಡಿದ ಉತ್ತೇಜನ; ಸುಸ್ಥಿರ ಅಭಿವೃದ್ಧಿ ಗುರಿಗಳು; ಕೈಗಾರಿಕಾ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಉತ್ತೇಜನಾ ಕ್ರಮಗಳು ಸೇರಿದಂತೆ ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ಮಳಿಗೆಯಲ್ಲಿ ಪ್ರದರ್ಶಿಸಲಾಗಿದೆ.
ಇದರೊಂದಿಗೆ ಕಲ್ಯಾಣ ಕರ್ನಾಟಕ ಪರ್ವಕ್ಕೆ ಚಾಲನೆ ನೀಡಿದ ಸರ್ಕಾರವು ಹೈದ್ರಾಬಾದ್ ಕರ್ನಾಟಕ ಎಂದ ನಾಮಕರಣ ಮಾಡುವುದರ ಜತೆಗೆ ಅದೇ ದಿನ ೩೮.೧೭ ಕೋಟಿ ವೆಚ್ಚದ ಸವಲತ್ತುಗಳ ವಿತರಣೆ ಮತ್ತು ಕಾಮಗಾರಿಗಳ ಶಂಕುಸ್ಥಾಪನೆ ಮಾಡಿರುವ ಮಾಹಿತಿಯನ್ನು ಮಳಿಗೆಯಲ್ಲಿ ಪ್ರದರ್ಶಿಸಲಾಗಿದೆ.
ಕಿತ್ತೂರು ಉತ್ಸವದಲ್ಲಿ ಭಾಗವಹಿಸಿರುವ ಸಾವಿರಾರು ಜನರು ಮಳಿಗೆಗೆ ಭೇಟಿ ನೀಡಿ, ಸರ್ಕಾರದ ಅಭಿವೃದ್ಧಿಪರ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರು.
ಅ.೨೩ ರಿಂದ ಮೂರು ದಿನಗಳ ಕಾಲ ವಿಶೇಷ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button