*ಕೆಎಸ್ಆರ್ಟಿ ಬಸ್ ಸ್ಟೇರಿಂಗ್ ಗೆ ಚಾಲಕನ ಕೈ ಕಟ್ಟಿಹಾಕಿ ರೈತರ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ ಸರಣಿ ಪ್ರತಿಭಟನೆಗಳು ಕೂಡ ಶುರುವಾಗಿದೆ. ಅನ್ನದಾತರು ರೊಚ್ಚಿಗೆದ್ದು ಬೀದಿಗಿಳಿದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟಿಸಿದ್ದಾರೆ.
ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ಅನ್ನದಾತರು ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಬಂದವು. ಓಡಿ ಬಂದು ಬಸ್ ಅಡ್ಡಗಟ್ಟಿದ ರೈತರು, ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿ ಗಮನ ಸೆಳೆದಿದ್ದಾರೆ.
ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ಆರಂಭಿಸಿದ್ದರು ಈ ವೇಳೆ ಘಟನೆ ನಡೆದಿದೆ.
ಅಧಿವೇಶನದ ಮೊದಲ ದಿನವೇ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದಿದ್ದಾರೆ. ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಹಾಗೂ ರೈತರ ನಡುವೆ ತೀವ್ರ ವಾಗ್ವಾದ ನಡೆದಿದೆ.
ರಸ್ತೆ ತಡೆಯ ಮಧ್ಯೆ ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಂಡು ಮುಂದೆ ಸಾಗಿದರು. ಬೆನ್ನಟ್ಟಿ ಬಂದ ರೈತರು ಬಸ್ ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ