
ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆ
ಪ್ರಗತಿವಾಹಿನಿ ಸುದ್ದಿ: ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 116 ಕೆಜಿ ತೂಕವುಳ್ಳ 41 ವರ್ಷದ ವ್ಯಕ್ತಿಗೆ ತನ್ನ ಸೊಸೆಯೇ ಯಕೃತ್ನ ಒಂದು ಭಾಗವನ್ನು ದಾನ ಮಾಡುವ ಮೂಲಕ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ನಡೆಸಲಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಯಕೃತ್ ಕಸಿ ಶಸ್ತ್ರಚಿಕಿತ್ಸಕ ಡಾ. ಕಿಶೋರ್ ಜಿ.ಎಸ್.ಬಿ. ಹಾಗೂ ಡಾ. ಪಿಯೂಷ್ ಸಿನ್ಹಾ ಅವರ ನೇತೃತ್ವದಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಕುರಿತು ಮಾತನಾಡಿದ ಡಾ. ಕಿಶೋರ್ ಜಿಎಸ್ಬಿ, ಆಫ್ರಿಕಾ ಮೂಲಕ ಜಾನ್ ಎಂಬ ವ್ಯಕ್ತಿಯು ಕಳೆದ 3-4 ವರ್ಷಗಳಿಂದ ಡಿಕಂಪೆನ್ಸೇಟೆಡ್ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಇದು ತೀವ್ರವಾದ ಪಿತ್ತಜನಕಾಂಗದ ಹಾನಿ, ಅಸ್ಸೈಟ್ಸ್ (ಹೊಟ್ಟೆಯಲ್ಲಿ ದ್ರವದ ಶೇಖರಣೆ), ಕಾಮಾಲೆ ಮತ್ತು ಉಸಿರಾಟದ ತೊಂದರೆ ಉಂಟು ಮಾಡಲಿದೆ. ಅಲ್ಲದೆ, ಅತಿಯಾದ ತೂಕ ಹೊಂದಿದ್ದರಿಂದ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಗೆ ಒಳಗಾಗುತ್ತಿದ್ದ ಕಾರಣ ಅವರ ಸ್ಥಿತಿ ಇನ್ನಷ್ಟು ಜಟಿಲವಾಗಿತ್ತು.

ಲಿವರ್ ಕಸಿ ಮಾಡುವ ಎಂಟು ತಿಂಗಳ ಮೊದಲೇ ಮದ್ಯಪಾನ ಸೇವನೆ ನಿಲ್ಲಿಸಿದ್ದರೂ ಅವರ ಯಕೃತ್ತಿನ ಕಾರ್ಯವು ಕ್ಷೀಣಿಸುತ್ತಲೇ ಇತ್ತು. ಇವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಬಳಿಕ ಅವರ ಯಕೃತ್ನ ಗುಲ್ಮ ಹಿಗ್ಗಿರುವುದು ತಿಳಿದುಬಂತು. ಯಕೃತ್ತಿನ ಕಾಯಿಲೆಯಿಂದ ಮೂತ್ರಪಿಂಡ ವೈಫಲ್ಯ, ಪಿತ್ತಜನಕಾಂಕದ ವೈಫಲ್ಯ ಹಾಗೂ ಮೆದುಳಿನ ಅಸಮಪರ್ಕ ಕ್ರಿಯೆಯ ಸಮಸ್ಯೆಯ ಉಲ್ಭಣ ಕಂಡು ಬಂತು. ಈ ಎಲ್ಲಾ ಸಮಸ್ಯೆಗೂ ಮೊದಲು ಯಕೃತ್ನ ಕಸಿ ಅತ್ಯವಶ್ಯಕವಾಗಿತ್ತು. ಆದರೆ, ಅವರ ಆರೋಗ್ಯದ ಪರಿಸ್ಥಿತಿ ಗಮನಿಸಿದರೆ, ಅವರಿಗೆ ಮೃತದಾನಿಯ ಯಕೃತ್ತನ್ನು ಕಸಿ ಮಾಡುವುದು ಸವಾಲಾಗಿತ್ತು. ಹೀಗಾಗಿ ಅವರಿಗೆ ಜೀವಂತ ದಾನಿಯ ಯಕೃತ್ತಿನ ಅವಶ್ಯಕತೆಯಿತ್ತು. ಅವರ 26 ವರ್ಷದ ಸೊಸೆಯೇ ತಮ್ಮ ಲಿವರ್ನ ಒಂದು ಭಾಗವನ್ನು ದಾನ ಮಾಡಲು ಮುಂದಾದರು.
ನಾವು ಯಕೃತ್ತಿನ ಸಾಮಾನ್ಯಕ್ಕಿಂತ ಚಿಕ್ಕದಾದ ಭಾಗವನ್ನು ಕಸಿ ಮಾಡಿದ್ದು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯಾದ 16 ದಿನಗಳ ನಂತರ ರೋಗಿಯು ಕ್ಷೇಮವಾಗಿ ಮನೆಗೆ ತೆರಳಿದರು. ಯಕೃತ್ ದಾನ ಮಾಡಿದ ಮಹಿಳೆಯು ಸಹ 7 ದಿನಗಳಲ್ಲಿ ಸುಧಾರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ