ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ಸರಣಿ ಬಾಣಂತಿಯರ ಸಾವಿನ ಬಳಿಕ ಚಿತ್ರದುರ್ಗದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಾಣಂತಿಯ ಸಾವಾಗಿದೆ. ಮಹಿಳೆ ತನ್ನ 40 ದಿನದ ಮಗುವನ್ನು ಅಗಲಿದ್ದಾಳೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಗನೂರುಹಟ್ಟಿ ಗ್ರಾಮದ ರೋಜಮ್ಮ ಅಕ್ಟೋಬರ್ 31 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಐದು ದಿನಗಳ ಬಳಿಕ ಬಾಣಂತಿ ಡಿಸ್ಟಾರ್ಜ್ ಆಗಿದ್ದರು. ಆದರೆ ಆಕೆಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು.
ನಿನ್ನೆ ಮಹಿಳೆಗೆ ಹೊಟ್ಟೆ ನೋವು ತೀವ್ರವಾಗಿ ವಾಂತಿಯಾಗಿದೆ. ಹೀಗಾಗಿ ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೋಜಮ್ಮ ಸಾವನ್ನಪ್ಪಿದ್ದಾರೆ.
ರೋಜಮ್ಮಗೆ ಸಿಸೇರಿಯನ್ ಹೆರಿಗೆ ಮಾಡಿದ್ದು, ಹೊಲಿಗೆ ಹಾಕಿದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ರೋಜಮ್ಮಳಿಗೆ 40 ದಿನಗಳ ಮಗು ಸೇರಿ ಮೂವರು ಮಕ್ಕಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ