ಪ್ರಗತಿವಾಹಿನಿ ಸುದ್ದಿ: ಸಂಧ್ಯಾ ಥಿಯೇಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಇದೀಗ ಬೆಳಗ್ಗೆ 6.30ಕ್ಕೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಪುಷ್ಪ 2′ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್ ರನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ಸಂಬಂಧ ಅಲ್ಲು ಅರ್ಜುನ್ ವಿರುದ್ಧ 105, 118 (5) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು, ಕೂಡಲೇ ವಕೀಲ ಅಶೋಕ್ ರೆಡ್ಡಿ ಜಾಮೀನು ಕೋರಿ ಹೈ ಕೋರ್ಟ್ ಮೊರೆಹೋಗಿದ್ದರು, ಈ ವೇಳೆ ನಟನಿಗೆ 4 ವಾರಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದರು.
ಅದರಂತೆ ಶುಕ್ರವಾರ ಮಧ್ಯರಾತ್ರಿಯವರೆಗೂ ಅಲ್ಲು ಅರ್ಜುನ್ ಬಿಡುಗಡೆಯ ಪ್ರಕ್ರಿಯೆ ಮುಂದುವರೆದಿತ್ತು. ಇದೀಗ ಇಂದು ಬೆಳಗ್ಗೆ 6.30ರ ಸುಮಾರಿಗೆ ನಟ ಅಲ್ಲು ಅರ್ಜುನ್ ರನ್ನು ಬಿಡುಗಡೆ ಮಾಡಲಾಗಿದೆ.
ಇದೀಗ ಈ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ಪರ ವಕೀಲ ಅಶೋಕ್ ರೆಡ್ಡಿ ಅಲ್ಲು ಅರ್ಜುನ್ ರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈ ಕೋರ್ಟ್ ಆದೇಶ ಹೊರಡಿಸಿತ್ತು, ಆದರೆ ಆದೇಶ ಪ್ರತಿಯನ್ನು ಹೈದರಾಬಾದಿನ ಜೈಲಾಧಿಕಾರಿ ಸರಿಯಾಗಿ ಪಾಲಿಸದೆ ಬಿಡುಗಡೆಗೆ ಸಮಯ ತೆಗೆದುಕೊಂಡರು ಎಂದರು.
ಅಲ್ಲದೇ ಹೈ ಕೋರ್ಟ್ ಆದೇಶವನ್ನು ಜೈಲಾಧಿಕಾರಿಗಳು ಕಡೆಗಣಿಸಿದ್ದಾರೆ. ಇದು ಕಾನೂನು ಬಾಹಿರ, ಇದಕ್ಕೆ ಅವರು ಖಂಡಿತವಾಗಿ ಕೂಡ ಉತ್ತರಿಸಬೇಕಾಗುತ್ತದೆ. ಸದ್ಯದಲ್ಲೇ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಕೀಲ ಅಶೋಕ್ ರೆಡ್ಡಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ