ಪ್ರಗತಿವಾಹಿನಿ ಸುದ್ದಿ: ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯಲ್ಲಿ 37.74 ಕೋಟಿ ರೂ. ವಿದ್ಯುತ್ ಬಾಕಿಯನ್ನು ಸರಕಾರದ ವತಿಯಿಂದಲೇ ಪಾವತಿಸುವುದು ಹಾಗೂ 15.71 ಕೋಟಿ ಬಾಕಿ ಬಡ್ಡಿ ಮನ್ನಾ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ತಮ್ಮ ಮನವಿಗೆ ಸಚಿವ ಸಂಪುಟ ಸ್ಪಂದಿಸಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಸುವರ್ಣಸೌಧದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಮೈಶುಗರ್ ಕಾರ್ಖಾನೆ ಪಾವತಿಸಿಬೇಕಿದ್ದ 37.74 ಕೋಟಿ ವಿದ್ಯುತ್ ಶುಲ್ಕ ಬಾಕಿಯನ್ನು ಸರಕಾರದ ವತಿಯಿಂದಲೇ ಪಾವತಿಸಲು ಹಾಗೂ 15.71 ಕೋಟಿ ಬಾಕಿ ಬಡ್ಡಿ ಮನ್ನಾ ಮಾಡಲು ನಿರ್ಣಯಿಸಿದೆ. ಹೀಗಾಗಿ 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಸಮಸ್ಯೆ ನಿವಾರಣೆ ಆಗಿದೆ.
ಆರ್ಥಿಕವಾಗಿ ತೊಂದರೆಯಲ್ಲಿದ್ದ ಸರಕಾರಿ ಸ್ವಾಮ್ಯದ ಈ ಕಾರ್ಖಾನೆಯನ್ನು ಉಳಿಸಿ, ರೈತರು ಬೆಳೆದಿರುವ ಕಬ್ಬು ನುರಿಸುವ ಕಾರ್ಯ ಆರಂಭಿಸಲು ಸಾಧ್ಯವಾಗುವಂತೆ ಚಾಮುಂಡೇಶ್ವರಿ ವಿದ್ಯುತ್ ಕಂಪನಿಗೆ ವಿದ್ಯುತ್ ಬಾಕಿ ಪಾವತಿಸಲು ನೆರವಾಗುವಂತೆ ಕಳೆದ ಜುಲೈ 5 ರಂದು ದಿನೇಶ್ ಗೂಳಿಗೌಡರು ಸಿಎಂ ಸಿದ್ದರಾಮಯ್ಯ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಿದ್ದರು.
ತಮ್ಮ ಮನವಿಗೆ ಸ್ಪಂದಿಸಿ, ಮೈಶುಗರ್ ಕಾರ್ಖಾನೆಗೆ ನೆರವಾಗಿದ್ದಕ್ಕಾಗಿ ಗೂಳಿಗೌಡರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ