*ಸಿಟಿ ರವಿ ಮೇಲೆ ಗುಂಡಾ ವರ್ತನೆ ನಡೆಸಲಾಗಿದೆ: ವಿಜಯೇಂದ್ರ ಆರೋಪ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿ.ಟಿ.ರವಿ ಪದ ಬಳಕೆ ಮಾಡಿರುವ ಯಾವುದೇ ದಾಖಲೆಗಳು ಇಲ್ಲ ಎಂದು ರೂಲಿಂಗ್ ಕೊಟ್ಟಿದ್ದಾರೆ. ಪೊಲೀಸರು ಬಂಧಿಸಿದ್ದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯ ಘನತೆಗೆ ಧಕ್ಕೆಯಾಗಿರುವುದು ಗಂಭೀರವಾಗಿ ಇರುವ ಆರೋಪ. ಇದು ಸಂಪೂರ್ಣ ತನಿಖೆಯಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಎಫ್ಎಸ್ಎಲ್ ಗೆ ಕಳುಹಿಸಿ ಪರೀಕ್ಷೆಯಾಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು ಎಂದರು.
ಸಭಾಪತಿ ರೂಲಿಂಗ್ ಕೊಟ್ಟ ಮೇಲೂ ಸಿ.ಟಿ.ರವಿ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧದ ಒಳಗಡೆ ನುಗ್ಗಿ ಗೂಂಡಾವರ್ತನೆ ಮಾಡಿದ್ದಾರೆ. ಸಿ.ಟಿ.ರವಿ ಮಾಜಿ ಸಚಿವ, ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಪೊಲೀಸರು ಹೊತ್ತಾಕ್ಕೊಂಡು ಹೋಗಿ ಬಾಗಲಕೋಟ, ಗದಗ, ರಾಮದುರ್ಗ ಎಲ್ಲಾ ಕಡೆ ರಾತ್ರಿಯಿಡೀ ಆತಂಕವಾದಿಗಳ ರೀತಿ ಸುತ್ತಾಡಿಸಿದ್ದು ಸರಕಾರ ನಡೆದುಕೊಂಡ ರೀತಿ ಖಂಡನಾರ್ಹ ಎಂದು ವಾಗ್ದಾಳಿ ನಡೆಸಿದರು.
ಸರಕಾರ ಪೊಲೀಸರ ಮೂಲಕ 410ಕ್ಕೂ ಹೆಚ್ಚು ಕಿ.ಮೀ ರಾತ್ರಿಯಿಡೀ ಸಿ.ಟಿ ರವಿಯನ್ನು ಸುತ್ತಾಡಿಸಿ ಪೊಲೀಸರು ದಬ್ಬಾಳಿಕೆ ಮಾಡಿ ದೌರ್ಜನ್ಯ ನಡೆಸುವುದು ಖಂಡನೀಯ. ಸಿ.ಟಿ.ರವಿ ಬಂಧನ ಮಾಡಿರುವ ಕುರಿತು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡುವ ಕರೆ ನೀಡಲಾಗಿದೆ. ಹಿಂದೆಂದೂ ಕೂಡ ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಇಂಥ ಘಟನೆ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ವಕೀಲರು, ವಿಪಕ್ಷ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ಕಾರ್ಯಕರ್ತರು ಭೇಟಿಗೆ ಅವಕಾಶ ಕೊಡದೆ ದೌರ್ಜನ್ಯ ಮಾಡಿದ್ದು ಅಕ್ಷಮ್ಯ ಅಪರಾಧ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ