Kannada NewsKarnataka NewsLatest

ಉತ್ಸವದ ವೇದಿಕೆ ಮೇಲೆ ಕಲಾವಿದರಿಗೆ ತಾರತಮ್ಯ: ಪ್ರೇಕ್ಷಕರ ಆಕ್ರೋಶ

ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು : ಐತಿಹಾಸಿಕ  ಚನ್ನಮ್ಮಾಜಿ ಉತ್ಸವದ ಅಂಗವಾಗಿ  ನಡೆಯುತ್ತಿರುವ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಮಳೆಯನ್ನು ಲೆಕ್ಕಿಸದೆ ಜಿಲ್ಲೆಯ ವಿವಿಧೆಡೆಯಿಂದ  ಜನಸಾಗರ ಹರಿದು ಬರುತ್ತಿದೆ. ಆದರೆ ಕಲಾವಿದರ ಬಗ್ಗೆ ಆಯೋಜಕರು ತಾತ್ಸಾರ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ, ಆಕ್ರೋಶ ವ್ಯಕ್ತವಾಗುತ್ತಿದೆ.
 ಪ್ರತಿದಿನ  ಸಾಯಂಕಾಲದಿಂದ ವೇದಿಕೆ ಮೇಲೆ ನಡೆಯುವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಬಂದಿರುವ ಕಲಾವಿದರಿಗೆ ಅಧಿಕಾರಿಗಳು ತಾರತಮ್ಯ ಮಾಡುತ್ತಿರುವುದು ಪ್ರೇಕ್ಷಕರನ್ನು ಕೆರಳಿಸುತ್ತಿದೆ.
 ವೇದಿಕೆ ಮೇಲೆ ಸ್ಥಳೀಯ ಕಲಾವಿದರಿಗೆ ಎಳ್ಳುಕಾಳಿನಷ್ಟೂ ಮರ್ಯಾದೆ ಸಿಗದೆ, ಹೊರಗಡೆಯಿಂದ  ಲಕ್ಷಾಂತರ ರೂ. ಹಣ ಕೊಟ್ಟು ಕರೆಯಿಸಿದ  ಕಲಾವಿದರಿಗೆ ಅಧಿಕಾರಿಗಳು ಬಾರಿ ಗೌರವ ನೀಡುತ್ತಿದ್ದಾರೆ.
ಗುರುವಾರ ರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಕಲಾವಿದರಿಗೆ  ಕಲರ್ ಕಲರ್ ಲೈಟ್ ಗಳು ವಿವಿಧ ಶೈಲಿಯ ವಿಡಿಯೋಗ್ರಾಫಿ ವ್ಯವಸ್ಥೆ ಕಲ್ಪಿಸಲಾಯಿತು. ಆದರೆ ರಸಮಂಜರಿ ಕಾರ್ಯಕ್ರಮ ಮುಗಿದ ತಕ್ಷಣ ಅಧಿಕಾರಿಗಳು ಜನಪ್ರತಿನಿಧಿಗಳು ವೇದಿಕೆ ಮುಂಭಾಗದಲ್ಲಿ ಕುಳಿತ ಸ್ಥಳದಿಂದ ಎದ್ದು  ತಮ್ಮ ಮನೆಗಳ ಕಡೆ ಮುಖ ಮಾಡಿದರು.
 ಆ  ಕಾರ್ಯಕ್ರಮ ಮುಗಿದ ತಕ್ಷಣ ನಿಜಗುಣಿ ನಾಟಕ ಪ್ರದರ್ಶನ ಪ್ರಾರಂಭವಾಯಿತು. ಆದರೆ ಆ ನಾಟಕ ಪ್ರದರ್ಶನ ಮಾಡುವ ಕಲಾವಿದರಿಗೆ ಯಾವುದೇ ರೀತಿಯ ವ್ಯವಸ್ಥೆ ಕಲ್ಪಿಸಿದೆ ಅಧಿಕಾರಿಗಳು ಮನೆಯ ಕಡೆ ನಡೆದಿದ್ದು ಜನರು ಅಸಮಾಧಾನ ವ್ಯಕ್ತಪಡಿಸುವಂತಾಯಿತು.
ವೇದಿಕೆ ಮೇಲೆ ನಾಟಕ ಪ್ರದರ್ಶನ ಮಾಡುವ ಕಲಾವಿದರಿಗೆ  ಸರಿಯಾದ ಲೈಟಿಂಗ್, ಫೋಟೋಗ್ರಾಫರ್,  ವಿಡಿಯೋಗ್ರಾಫರ್ ಇಲ್ಲದೆ ಕಲಾವಿದರೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ನಾಟಕ ಪ್ರದರ್ಶನ ಮಾಡಲು ಬಂದಿರುವ ಕಲಾವಿದರಿಗೆ ನಾಟಕ ಪ್ರಾರಂಭವಾಗುವ ಮುಂಚೆಯೇ  ಕಲಾವಿದರಿಗೆ ಪ್ರಮಾಣಪತ್ರ  ನೀಡಿ ತಮ್ಮ ಕೈ ತೊಳೆದುಕೊಂಡು ಬಿಟ್ಟರು. ಇನ್ನೊಂದು ಕಡೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವ  ವ್ಯಕ್ತಿ ಕೂಡ ಕಲಾವಿದೆಗೆ ತಾರತಮ್ಯ ಮಾಡುವುದನ್ನು ಕಂಡು ನೋಡಲು ಬಂದ ಪ್ರೇಕ್ಷಕರು ವೇದಿಕೆ ಮೇಲೆ ಬಂದು ನಿರೂಪಣೆ ಮಾಡುತ್ತಿರುವ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡರು. ಕೋಟ್ಯಾಂತರ ಹಣ ಕರ್ಚು ಮಾಡಿ ನಡೆಸುವಂತ ಕಾರ್ಯಕ್ರಮದ ವೇದಿಕೆಯ ಹತ್ತಿರ ಯಾವುದೇ ಅಧಿಕಾರಿಗಳು ಇಲ್ಲದಿರುವುದನ್ನೂ ಗಮನಿಸಿದ ಜನರು ಚನ್ನಮ್ಮಜಿಗೆ ಅವಮಾನ ಮಾಡಿದಂತೆ ಎಂದು ಮಾತನಾಡಲು ಪ್ರಾರಂಭಿಸಿದರು.
ಕಾರ್ಯಕ್ರಮದಲ್ಲಿ ಅಶ್ಲೀಲ ಮಾತುಗಳ ಕಾಮಿಡಿ, ಡ್ಯಾನ್ಸ್ ನಡಿತಾ ಇದ್ರೆ ಅದನ್ನು ನೋಡಲು ಅಧಿಕಾರಿಗಳು ಜನಪ್ರತಿನಿಧಿಗಳು ಮಧ್ಯರಾತ್ರಿ 2 ಗಂಟೆ ವರೆಗೆ ಕುಳಿತು ವೀಕ್ಷಣೆ ಮಾಡುತ್ತಾರೆ. ನಂತರದ ನಾಟಕ ಪ್ರಾರಂಭವಾಗುತ್ತಿದ್ದತೆ. ವೀಕ್ಷಣೆ ಮಾಡಲು ಯಾವುದೇ ರೀತಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಬ್ಬರೂ ವೇದಿಕೆ ಹತ್ತಿರ ಇರದೇ  ಮನೆ ಕಡೆ ಹೋಗುತ್ತಾರೆ ಎಂದು ಜನರು ಆರೋಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button