Belagavi NewsBelgaum NewsLatest

*ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ… ಈ ಡಿ.ಕೆ. ಶಿವಕುಮಾರ್ ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಈ ಡಿ.ಕೆ.ಶಿವಕುಮಾರ್ ಇನ್ನೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದಾನೆ. ಬಿಜೆಪಿಯವರ ಪ್ರತಿಭಟನೆಗೆ ನಾನು ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಸೋಮವಾರ ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ವೇಳೆ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, “ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದ್ದಾರೆ. ಇದೆಲ್ಲವೂ ಅವರ ನೇತೃತ್ವದ ಹೋರಾಟದ ಫಲ. ಇದೆಲ್ಲವನ್ನು ಉಳಿಸಿಕೊಂಡು ಸರಿಯಾದ ರೀತಿಯಲ್ಲಿ ಜಾರಿಯಲ್ಲಿಡಬೇಕು. ಗಾಂಧೀಜಿ ಅವರನ್ನು ದಿನನಿತ್ಯ ನೆನೆಯಬೇಕು ಎಂಬ ಕಾರಣಕ್ಕೆ ಮಹಾತ್ಮ ಗಾಂಧಿಜಿ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಣ ಮಾಡಲಾಗಿದೆ. ಮಹಾತ್ಮ ಎಂಬ ಹೆಸರು ಪಡೆದ ನಾಯಕನ ಸ್ಮರಣೆ ಮಾಡುವ ಆಚರಣೆ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದರೆ ನಾವು ಹೆದರುತ್ತೇವಾ?” ಎಂದು ಸವಾಲೆಸೆದರು.

ಸಿ.ಟಿ ರವಿ ಅವರನ್ನು ಫೇಕ್ ಎನ್ ಕೌಂಟರ್ ಮಾಡುವ ಹುನ್ನಾರ ನಡೆದಿತ್ತು ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಜೋಷಿ ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅದಕ್ಕೆ ಗೃಹಸಚಿವರು, ಪೊಲೀಸರು ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.

ಸಿ.ಟಿ. ರವಿ ಅವರನ್ನು ಸುತ್ತಾಡಿಸಿದ್ದರ ಬಗ್ಗೆ ಮಾತನಾಡುವ ಬಿಜೆಪಿಯವರು ಸಿ.ಟಿ ರವಿ ಮಹಿಳೆಯರ ಬಗ್ಗೆ ಆಡಿರುವ ಮಾತಿನ ಬಗ್ಗೆ ಯಾರೂ ಕೇಳುತ್ತಿಲ್ಲ ಎಂದು ಕೇಳಿದಾಗ, “ಈ ವಿಚಾರವನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಈ ವಿಚಾರವಾಗಿ ನಾವು ಈಗ ಮಾತನಾಡುವುದಿಲ್ಲ. 27ರಂದು ಕಾರ್ಯಕ್ರಮಗಳು ಮುಗಿಯಲಿ ನಂತರ ಮಾತನಾಡುತ್ತೇವೆ” ಎಂದರು.

ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಕಾರಣ ಎಂಬ ರೀತಿ ಬಿಂಬಿಸಲಾಗುತ್ತಿದೆ ಎಂದು ಕೇಳಿದಾಗ, “ನೀವು ಬಲಿಷ್ಠರಾಗಿದ್ದಷ್ಟು ಹೆಚ್ಚು ಶತ್ರುಗಳು. ನೀವು ಕಡಿಮೆ ಶಕ್ತಿಶಾಲಿಯಾದರೆ ಕಡಿಮೆ ಶತ್ರುಗಳು, ನೀವು ದುರ್ಬಲರಾಗಿದ್ದರೆ ಯಾವುದೇ ಶತ್ರುಗಳಿರುವುದಿಲ್ಲ. ಹೆಚ್ಚು ಕೆಲಸ ಮಾಡಿದಷ್ಟು ಹೆಚ್ಚು ತಪ್ಪುಗಳು, ಕಡಿಮೆ ಕೆಲಸ ಮಾಡಿದಷ್ಟು ಕಡಿಮೆ ತಪ್ಪುಗಳು, ಕೆಲಸಗಳೇ ಮಾಡದಿದ್ದರೆ ತಪ್ಪುಗಳೇ ಇರುವುದಿಲ್ಲ” ಎಂದು ತಿಳಿಸಿದರು.

ಸರ್ಕಾರಕ್ಕೆ ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತ್ಯೇಕವಾಗಿ ಮಾತನಾಡುತ್ತೇನೆ” ಎಂದರು.

ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಇದೇ ತಿಂಗಳು 27 ರಂದು ಸಾರ್ವಜನಿಕ ಕಾರ್ಯಕ್ರಮ ನಡೆಯುವ ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಶಾಲಾ ಮೈದಾನಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸೋಮವಾರ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಗಣೇಶ್ ಹುಕ್ಕೇರಿ, ಅಂಜಲಿ ನಿಂಬಾಳ್ಕರ್ ಮತ್ತಿತರರು ಜತೆಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button