*ಬಹುನಿರೀಕ್ಷಿತ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್*: *ರಾಷ್ಟ್ರಪತಿಯಿಂದ ಲೋಕಾರ್ಪಣೆ*: *ಡಾ.ಪ್ರಭಾಕರ ಕೋರೆ ಮಾಹಿತಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಹುನಿರೀಕ್ಷಿತ ಕೆಎಲ್ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಇದೇ ದಿ. 30 ಡಿಸೆಂಬರ್ 2024 ರಂದು ಮಧ್ಯಾಹ್ನ 4 ಗಂಟೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಜನಸೇವೆಗೆ ಅರ್ಪಿಸಲಿದ್ದಾರೆ ಎಂದು ತಿಲಿಸಿದರು.
ಗೌರವ ಅತಿಥಿಗಳಾಗಿ ರಾಜ್ಯಪಾಲರಾದ ಥಾವರಚಂದ ಗೆಹ್ಲೋತ, ಕೇಂದ್ರದ ಗ್ರಾಹಕ ಸೇವೆ, ಆಹಾರ ಮತ್ತು ನಾಗರೀಕ ಪೂರೈಕೆ, ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಷಿ, ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಾಲ್ಯಾಭಿವೃದ್ದಿ ಸಚಿವರಾದ ಶರಣಪ್ರಕಾಶ ಪಾಟೀಲ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಸಂಸದರಾದ ಜಗದೀಶ ಶೆಟ್ಟರ, ಶಾಸಕರಾದ ರಾಜು ಸೇಟ್, ಅಭಯ ಪಾಟೀಲ ಮತ್ತು ಕಾಹೇರ್ ಉಪಕುಲಪತಿ ಡಾ. ನಿತಿನ ಗಂಗಾಣೆ, ದಾನಿಗಳಾದ ಡಾ. ಸಂಪತಕುಮಾರ ಶಿವಾನಗಿ ಹಾಗೂ ಡಾ. ಉದಯಾ ಶಿವಾನಗಿ ಅವರು ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಲಿದ್ದಾರೆ.
ಡಾ.ಪ್ರಭಾಕರ ಕೋರೆ ಕನಸು
ಜನರಿಗೆ ಕಡಿಮೆದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸಿಗಬೇಕೆನ್ನುವ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಸಂಕಲ್ಪದ ಫಲವಾಗಿ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ ಕೆಎಲ್‌ಇ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನರಿಗೆ ವರದಾನವಾಗಿ ಪರಿಣಮಿಸಿದೆ. ಕ್ಯಾನ್ಸರ್ ಚಿಕಿತ್ಸೆ ಎಂದರೆ ದುಬಾರಿ, ಈ ಭಾಗದ ಜನರು ಚಿಕಿತ್ಸೆ ಪಡೆಯುವದೆಂದರೆ ಗಗನ ಕುಸುಮ. ಜನರ ಬವಣೆಯನ್ನು ಕಣ್ಣಾರೆ ಕಂಡು ಕೈಗೆಟಕುವ ದರದಲ್ಲಿ ನೀಡಲು ಡಾ. ಪ್ರಭಾಕರ ಕೋರೆ ಅವರು ಪಣ ತೊಟ್ಟರು. ಅದರಂತೆ ಬೆಳಗಾವಿಯಲ್ಲಿ ಪ್ರತ್ಯೇಕವಾದ ಸುಮಾರು 300 ಹಾಸಿಗೆಗಳ ಸೌಲಭ್ಯವುಳ್ಳ 1 ಲಕ್ಷ 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆದರು. ಅವರು ಬಯಸಿದಂತೆ ಈ ಭಾಗದ ಜನರಿಗೆ ಕ್ಯಾನ್ಸರ ಸಂಬಂಧಿತ ಖಾಯಿಲೆಗಳಿಗೆ ವಿಶ್ವ ಗುಣಮಟ್ಟದ ಸಮಗ್ರ ಚಿಕಿತ್ಸೆಯನ್ನು ನೀಡುವ ಮಹದಾಸೆ ಇಂದು ಪೂರ್ಣಗೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೃಹತ ಕ್ಯಾನ್ಸರ ಆಸ್ಪತ್ರೆ ಇಂದು ತಲೆ ಎತ್ತಿ ನಿಂತಿದೆ.
ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸಹಾಯಾರ್ತವಾಗಿ ದಾನ ನೀಡಿದ ಡಾ. ಸಂಪತಕುಮಾರ ಎಸ್ ಶಿವಾನಗಿ ಹಾಗೂ ಡಾ. ಉದಯಾ ಶಿವಾನಗಿ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ. ಕ್ಯಾನ್ಸರ್ ಸಂಬಂಧಿತ ಖಾಯಿಲೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಹಾಗೂ ಎಲ್ಲ ಪ್ರಕ್ರಿಯೆಗಳನ್ನು ಮಾಡಬೇಕೆನ್ನುವ ಕನಸು ಈಗ ನನಸಾಗಿದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಿಂಬಾಗದಲ್ಲಿ ಸುಸಜ್ಜಿತವಾದ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಕ್ಯಾನ್ಸರ್ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಹೊಂದಿದೆ.
ಕ್ಯಾನ್ಸರ್ ಚಿಕಿತ್ಸೆಗಾಗಿ ಬೇರೆ ಬೇರೆ ನಗರಗಳಿಗೆ ಅಲೆಯವದನ್ನು ತಪ್ಪಿಸಿ ಬಹುವಿಧ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿರುವ ಇಲ್ಲಿ ಕ್ಯಾನ್ಸರ್ ಸಂಬಂಧಿತ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯಿಂದ ಹಿಡಿದು, ಕೀಮೋಥೆರಪಿ, ರೆಡಿಯೋಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರ ಇಚ್ಚೆಯಂತೆ ಆಸ್ಪತ್ರೆಯು ಜನಸೇವೆಗೆ ತೆರೆದುಕೊಂಡಿದೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಡಾ. ಎಂ. ವಿ. ಜಾಲಿ ಅವರು ಕಳೆದ ಸುಮಾರು 2 ವರ್ಷದಿಂದ ಆಸ್ಪತ್ರೆಯನ್ನು ಸಜ್ಜುಗೊಳಿಸುವಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ರೊಬೊಟಿಕ್ ಶಸ್ತ್ರಚಿಕಿತ್ಸೆ:
ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಶಸ್ತ್ರಚಿಕಿತ್ಸೆಗಾಗಿ ರೋಬೊಟಿಕ್ ಅಳವಡಿಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ರೋಗಿಗಳನ್ನು ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಿದೆ. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ.
ರೊಬೊಟಿಕ್ ಶಸ್ತ್ರಚಿಕಿತ್ಸೆಯು ಲ್ಯಾಪರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸೆ ಎರಡಕ್ಕೂ ಸೈ ಎನಿಸಿಕೊಂಡಿದೆ. ಭಾರತದಲ್ಲಿಯೇ ತಯಾರಿಸಿದ ಎಸ್‌ಎಸ್‌ಐ ತಂತ್ರಜ್ಞಾನ ಸರ್ಜಿಕಲ್ ರೊಬೊಟಿಕ್ ಇದಾಗಿದ್ದು, ಅತ್ಯಂತ ನಿಖರತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವಲ್ಲಿ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿಗೆ ಸಹಕಾರಿಯಾಗಿದೆ. ಕಿರಿದಾದ ಸ್ಥಳಗಳಲ್ಲಿ ಮಿಲಿಮೀಟರ್-ಬೈ-ಮಿಲಿಮೀಟರ್ ನಿಖರತೆಯೊಂದಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ, ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವದಲ್ಲದೇ ಕ್ಯಾನ್ಸರ್ ಚಿಕಿತ್ಸೆಯ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ. ಅತ್ಯಾಧುನಿಕ ಅರಿವಳಿಕೆ ಯಂತ್ರಗಳು, ಸಿ.ಮ್ಯಾಕ್ ವೀಡಿಯೋ ಲಾರಿಂಗೋಸ್ಕೋಪ್‌ಗಳು, ಅಂಬು ಸ್ಕೋಪ್, ಬ್ರಾಂಕೋಸ್ಕೋಪ್‌ಗಳು ಮತ್ತು ಇತರ ತಾಂತ್ರಿಕವಾಗಿ ಸುಧಾರಿತ ಉಪಕರಣ, ಅರಿವಳಿಕೆ ತಂತ್ರಜ್ಞರ ಸಹಕಾರದಿಂದ ರೋಗಿಗಳಿಗೆ ಸುರಕ್ಷಿತ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದೆ. ಬಾಯಿ, ಮೂಗು, ಸೈನಸ್, ಕುತ್ತಿಗೆ, ಸ್ತನ, ಶ್ವಾಸಕೋಶ, ಶ್ವಾಸನಾಳ, ಮೆಡಿಯಾಸ್ಟಿನಮ್, ಯಕೃತ್ತು ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ, ಹೊಟ್ಟೆ, ಸಣ್ಣ ಕರುಳು, ದೊಡ್ಡ ಕರುಳು, ರೆಟ್ರೊಪೆರಿಟೋನಿಯಮ್, ಅಂಡಾಶಯ, ಎಂಡೊಮೆಟ್ರಿಯಮ್, ಗರ್ಭಕಂಠ, ಯೋನಿ, ಯೋನಿ, ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳ, ಪ್ರಾಸ್ಟೇಟ್, ವೃಷಣ, ಶಿಶ್ನ, ಚರ್ಮ, ಮೂಳೆ ಮತ್ತು ಮೃದು ಅಂಗಾಂಶಗಳು. ಸ್ತನ ಆಂಕೊಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಗುದನಾಳದ ಸ್ಪಿಂಕ್ಟರ್ ಸಂರಕ್ಷಣೆ, ಧ್ವನಿಪೆಟ್ಟಿಗೆ ಅಂಗ ಸಂರಕ್ಷಣೆ, ಮೂತ್ರನಾಳ, ಮೂಳೆ ಗೆಡ್ಡೆಗಳಿಗೆ ಅಂಗ ಸಂರಕ್ಷಣೆ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳಿಗೆ ಸಂಕೀರ್ಣವಾದ ಶಸ್ತçಚಿಕಿತ್ಸೆ ಹಾಗೂ ಪುನರ್ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗುತ್ತಿದೆ.
ತೀವ್ರ ನಿಗಾ ಘಟಕ:
300 ಹಾಸಿಗೆಗಳ ಆಸ್ಪತ್ರೆಯಲ್ಲಿ ಗಂಭೀರ ಪರಿಸ್ಥಿಯಲ್ಲಿ ಚಿಕಿತ್ಸೆ ನೀಡಲು ಅಗತ್ಯವಿರುವ ತೀವ್ರ ನಿಗಾ ಘಟಕವನ್ನು ತೆರೆಯಲಾಗಿದ್ದು, ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಒಳಗೊಂಡಿದೆ. 35 ಹಾಸಿಗೆಗಳ ತೀವ್ರ ನಿಗಾ ಘಟಕವಿದ್ದು, ಅತ್ಯಾಧುನಿಕವಾದ 5 ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ.
ರೆಡಿಯೇಶನ್ ಥೆರಪಿ:
ರೆಡಿಯೇಶನ ಚಿಕಿತ್ಸೆಯ ಆವಿಷ್ಕಾರವು ಕ್ಯಾನ್ಸರ ಚಿಕಿತ್ಸೆಯಲ್ಲಿ ವಿಶ್ವವನ್ನೇ ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು. ಇಂದು, ಕ್ಯಾನ್ಸರ್ ರೋಗಿಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು ಕೆಲವು ರೀತಿಯ ರೇಡಿಯೊಥೆರಪಿಯಿಂದ ಗುಣಮುಖರಾಗುತ್ತಿದ್ದಾರೆ. ರೆಡಿಯೇಶನ್ ಆಂಕೊಲಾಜಿ ವಿಭಾಗವು ರೇಡಿಯಂ ಮತ್ತು ಕೋಬಾಲ್ಟ್ ಚಿಕಿತ್ಸೆಯಿಂದ ಹೆಚ್ಚಿನ ಶಕ್ತಿಯ ಎಕ್ಸ್-ರೇ ಲೀನಿಯರ್ ವೇಗವರ್ಧಕ ಚಿಕಿತ್ಸೆಯವರೆಗೆ ಬಹಳ ದೂರ ಸಾಗಿದೆ. ಸಿಟಿ, ಎಂ ಆರ್‌ಐ ಮತ್ತು ಪೆಟ್ ಸಿಟಿಯಂತಹ ಸುಧಾರಿತ ಇಮೇಜಿಂಗ್ ವಿಧಾನಗಳು ಗೆಡ್ಡೆಗಳನ್ನು ನಿಖರವಾಗಿ ಗುರುತಿಸುತ್ತವೆ. ಇಂಟೆನ್ಸಿಟಿ ಮಾಡ್ಯುಲೇಟೆಡ್ ರೇಡಿಯೊಥೆರಪಿ (ಐಎಂಆರ್ಟಿ), ವಾಲ್ಯೂಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್ ಥೆರಪಿ (ವಿಎಂಎಟಿ), ಇಮೇಜ್ ಗೈಡೆಡ್ ರೇಡಿಯೊಥೆರಪಿ (ಐಜಿಆರ್ಟಿ), 4ಡಿ ರೆಸ್ಪಿರೇಟರಿ ಗೇಟೆಡ್ ಥೆರಪಿ ಮತ್ತು ಸ್ಟೀರಿಯೊಟಾಕ್ಟಿಕ್ ರೇಡಿಯೊಥೆರಪಿಯಂತಹ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿಖರವಾದ ಚಿಕಿತ್ಸೆಯು ವೇಗವಾಗಿ ಮತ್ತು ಕಡಿಮೆ ಸಮಯದಲ್ಲಿ ಸಾಧ್ಯವಾಗಿಸಿದೆ.
ವಿಶ್ವದರ್ಜೆಯ ಗುಣಮಟ್ಟದ ಅತ್ಯಂತ ಸುಧಾರಿತ ಅತ್ಯಾಧುನಿಕ ಕೌಶಲ್ಯವುಳ್ಳ ರೇಡಿಯೇಶನ್ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಿದ್ದು, ಭಾರತದಲ್ಲಿಯೇ ಪ್ರಥಮವಾಗಿ ಎಸ್ ಆರ್ ಎಸ್ ಕೋನ್ಸ್, ಮೊಬಿಯಸ್ 3ಡಿ ವೆಲೊಸಿಟಿ ವೇಗದ ಸಮಗ್ರ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಎಂಡ್ ಹೈಪರ್‌ಆರ್ಕ್ ಟ್ರೂಬೀಮ್ ಹೊಂದಿದೆ. ಸ್ಟೀರಿಯೊಟಾಕ್ಟಿಕ್ ಆರ್ಟಿ – ನಿರ್ಣಾಯಕ ಸ್ಥಳಗಳಲ್ಲಿ ನಿಖರವಾದ ಚಿಕಿತ್ಸೆ. ವೇಗವಾದ ಚಿಕಿತ್ಸೆಯ ಸಮಯ. ಉಸಿರಾಟದ ಚಲನೆಯ ನಿರ್ವಹಣೆ, ಚಲಿಸುವ ಗೆಡ್ಡೆಗಳನ್ನು ಗುರಿಯಾಗಿಸುವುದು, ಜ್ಞಾನ ಆಧಾರಿತ ಯೋಜನೆಯು ದೋಷವನ್ನು ಕಡಿಮೆ ಮಾಡುತ್ತದೆ. ರೋಗಿಯ ನಿರ್ದಿಷ್ಟ ಗುಣಮಟ್ಟದ ಭರವಸೆಯೊಂದಿಗೆ ನಿಖರವಾದ ಡೋಸ್ ನೀಡಲು ಸಹಕರಿಸುತ್ತದೆ. ಅಲ್ಲದೆ ಬ್ರಾಕಿ ಚಿಕಿತ್ಸೆಗೆ ಸಹಕಾರಿಯಾಗುವ ಬೆಬಿಗ ಸಾಗಿನೊವಾ ಯಂತ್ರ ಅಳವಡಿಸಿದ್ದು ಇದರಿಂದ ಗಡ್ಡೆಮೇಲೆ ಮತ್ತು ಒಳಗೆ ನಿರ್ಧಾರಿತವಾದ ಚಿಕಿತೆ ನೀಡುತ್ತದೆ. ಸಮಗ್ರ ತಪಾಸಣೆಗಾಗಿ ಪಿಟಿಡಬ್ಲು ಮತ್ತು ಡೋಸಿಮೆಟ್ರಿ ಉಪಕರಣ, ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಐಸಿಬಿಸಿಟಿ ಹಾಲ್ಕಾಯನ್ ಇಲೈಟ್ ಯಂತ್ರ ಹಾಗೂ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಥಮವಾಗಿ ವೈಡ್ ಬೋರ್ ಸಿಟಿ ಸಿಮ್ಯುಲೇಟರ್ ಸಂಯೋಜಿತ ಲೇಸರ್ ಮತ್ತು 192 ಸ್ಲೈಸ್‌ಗಳ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಚಿಕ್ಕಮಕ್ಕಳ, ಮೆಡಿಕಲ್ ಆಂಕೊಲಾಜಿ, ಇಂಟರ್ವೆನ್ಷನಲ್ ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಫಿಜಿಯೋಥೆರಪಿ ವಿಭಾಗಗಳು ರೋಗಿಗಳ ಆರೈಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿವೆ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ಸರಕಾರಗಳ ಯೋಜನೆಗಳಡಿಯಲ್ಲಿಯೂ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಡಾ. ಎಂ ವಿ ಜಾಲಿ, ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ತಜ್ಞವೈದ್ಯರಾದ ಡಾ. ಕುಮಾರ ವಿಂಚುರಕರ, ಡಾ. ಇಮ್ತಿಯಾಜ, ಡಾ.ರಾಜೇಂದ್ರ ಮೆಟಗುಡಮಠ, ಡಾ. ರೋಹನ ಭಿಸೆ, ಡಾ. ಅಭಿಲಾಷಾ ಸಂಪಗಾರ ಸೇರದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ