ಜಿಲ್ಲೆಯಲ್ಲಿ ಡಿ.27, 29 ರಂದು ಬಿಎಲ್ ಓ/ಬಿಎಲ್ಎ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇದೇ ಡಿಸೆಂಬರ್ 31 ರೊಳಗೆ ಮತದಾರರ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಬೇಕಿರುವುದರಿಂದ ಡಿಸೆಂಬರ್ 27 ಮತ್ತು 29 ರಂದು ಜಿಲ್ಲೆಯಾದ್ಯಂತ ಬೂತ್ ಮಟ್ಟದಲ್ಲಿ ಬಿ.ಎಲ್.ಓ ಹಾಗೂ ಬಿ.ಎಲ್.ಎ. ಸಭೆ ನಡೆಸಲಾಗುವುದು. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ತಕ್ಷಣವೇ ಬೂತ್ ಲೆವೆಲ್(ಬಿಎಲ್ಎ) ಏಜೆಂಟರುಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಮನವಿ ಮಾಡಿಕೊಂಡರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಾನ್ಯತೆ ಹೊಂದಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಜಿಲ್ಲೆಯಲ್ಲಿ ಒಟ್ಟಾರೆ 1.86 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಡಿಸೆಂಬರ್ 31 ರೊಳಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಬೇಕಿದೆ. ಮತದಾರರ ಅಂತಿಮ ಪಟ್ಟಿ ಪ್ರಕಟಣೆಗಿಂತ ಮೊದಲು ಸದರಿ ಪಟ್ಟಿಯನ್ನು ಓದಿ ಹೇಳಬೇಕಾಗುತ್ತದೆ. ಆದ್ದರಿಂದ ಪಕ್ಷಗಳು ಬಿ.ಎಲ್.ಎ. ನೇಮಕ ಮಾಡಿ, ಅವರ ಮಾಹಿತಿ ಒದಗಿಸಿದರೆ ಕೂಡಲೇ ಸಭೆಯನ್ನು ನಡೆಸಿ ಪರಿಷ್ಕರಣೆ ಮಾಹಿತಿ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅರ್ಹ ಮತದಾರರ ಸೇರ್ಪಡೆ ಮತ್ತು ಅನರ್ಹ ಮತದಾರರ ಹೆಸರು ಕೈಬಿಡುವುದಕ್ಕೆ ಸಂಬಂಧಿಸಿದಂತೆ ಮತದಾರರ ಪರಿಷ್ಕೃತ ಪಟ್ಟಿ ಈಗಾಗಲೇ ರಾಜಕೀಯ ಪಕ್ಷಗಳಿಗೆ ಒದಗಿಸಲಾಗಿದೆ. ಈ ಬಗ್ಗೆ ಏನಾದರೂ ದೂರು ಅಥವಾ ಆಕ್ಷೇಪಣೆ ಇದ್ದರೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಬಿಎಲ್ಎ ಗಳ ನೇಮಕದಿಂದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಲೋಪದೋಷಗಳನ್ನು ಸರಿಪಡಿಸಲು ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲ ಪಕ್ಷಗಳು ಬಿಎಲ್ಎ ಪಟ್ಟಿ ತಕ್ಷಣ ನೀಡಬೇಕು ಎಂದರು.
ತಕ್ಷಣ ಬಿಎಲ್ಎ ನೇಮಕ:
ಸಭೆಯಲ್ಲಿ ಮಾತನಾಡಿದ ವಿವಿಧ ಪಕ್ಷದ ಪದಾಧಿಕಾರಿಗಳು, ಡಿ.27 ಮತ್ತು 29 ರಂದು ನಿಗದಿಪಡಿಸಲಾಗಿರುವ ಬಿಎಲ್ಓ/ ಬಿಎಲ್ಎ ಸಭೆಗಿಂತ ಮುಂಚೆಯೇ ಬಿಎಲ್ಎ ಗಳನ್ನು ನೇಮಿಸಿ, ವಿವರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಶಾಶ್ವತ ಸ್ಥಳಾಂತರ ಹೊಂದಿರುವ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಹೆಸರು ಕೈಬಿಡಲು ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಿ, ನೋಟಿಸ್ ಮನೆ ಬಾಗಿಲಿಗೆ ಅಂಟಿಸುವುದು ಮತ್ತು ಸ್ಥಳೀಯ ವಿಚಾರಣೆ ಬಳಿಕ ಹೆಸರು ಕೈಬಿಡಲಾಗುವುದು ಎಂದರು.
ಇದೇ ರೀತಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಮತದಾರರ ಹೆಸರು ಕೈಬಿಡುವುದು ಕಷ್ಟಕರವಾಗಿದೆ. ಈ ಬಗ್ಗೆಯೂ ವಿಸ್ತ್ರತ ಪರಿಶೀಲನೆ ನಡೆಸಲಾಗುವುದು ಎಂದರು.
ಭಾವಚಿತ್ರ ಸಲ್ಲಿಸಲು ಮನವಿ:
ಜಿಲ್ಲೆಯಲ್ಲಿ ಒಟ್ಟಾರೆ 5000 ಮತದಾರರ ಭಾವಚಿತ್ರಗಳು ಲಭಿಸಿಲ್ಲ. ಧಾರ್ಮಿಕ, ವಾಸಸ್ಥಳ ಬದಲಾವಣೆ ಮತ್ತು ತಾತ್ಕಾಲಿಕ ಸ್ಥಳಾಂತರ ಕಾರಣಕ್ಕೆ ಇದುವರೆಗೆ ಭಾವಚಿತ್ರ ಪಡೆಯುವುದು ಸಾಧ್ಯವಾಗಿಲ್ಲ. ಇದುವರೆಗೆ ಭಾವಚಿತ್ರ ಸಲ್ಲಿಸದಿರುವ ಮತದಾರರು ಡಿಸೆಂಬರ್ 23 ರೊಳಗೆ ತಮ್ಮ ಮತಗಟ್ಟೆಯ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ.
ಆಯೋಗದ ನಿರ್ದೇಶನದ ಪ್ರಕಾರ ನೂರಕ್ಕೆ ನೂರರಷ್ಟು ಮತದಾರರು ಭಾವಚಿತ್ರ ಹೊಂದಿರುವ ಗುರುತಿನ ಚೀಟಿ ಹೊಂದಿರಬೇಕಾಗುತ್ತದೆ. ಆದ್ದರಿಂದ ಇದುವರೆಗೆ ಭಾವಚಿತ್ರ ಸಲ್ಲಿಸದಿರುವ ಮತದಾರರು ಕೂಡಲೇ ಭಾವಚಿತ್ರ ಸಲ್ಲಿಸಬೇಕು ಎಂದರು.
ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಜಾತ್ಯಾತೀತ ಜನತಾದಳ, ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ್ ಕುರೇರ್, ಉಪ ವಿಭಾಗಾಧಿಕಾರಿಗಳಾದ ರವಿ ಕರನಿಂಗನವರ, ಡಾ.ಕವಿತಾ ಯೋಗಪ್ಪನವರ ಹಾಗೂ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ: ಎಚ್ಚರಿಕೆ ವಹಿಸಲು ಸೂಚನೆ
ನಿಧನ ಕಾರಣವನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಾಗ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಇದರಲ್ಲಿ ಲೋಪದೋಷ ಉಂಟಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಡಿ.22) ನಡೆದ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದುವೆ, ಶಾಶ್ವತ ಸ್ಥಳಾಂತರ ಮತ್ತಿತರ ಕಾರಣಕ್ಕೆ ಮತದಾರರ ಪಟ್ಟಿಯಿಂದ ಯಾರದೇ ಹೆಸರು ತೆಗೆದು ಹಾಕುವ ಮುಂಚೆ ಆಯೋಗದ ನಿರ್ದೇಶನದ ಪ್ರಕಾರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ನಿಯಮಾವಳಿ ಪ್ರಕಾರವೇ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬೇಕು. ಅದೇ ರೀತಿ ಹೆಸರು ಸೇರ್ಪಡೆ ಮಾಡುವಾಗಲೂ ಆಯೋಗದ ನಿರ್ದೇಶನದ ಪ್ರಕಾರವೇ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು, ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಸ್ವೀಕರಿಸಿದ್ದರೂ ತೆಗೆದುಕೊಂಡ ಕ್ರಮದ ಬಗ್ಗೆ ಪ್ರತಿಯೊಬ್ಬ ಅರ್ಜಿದಾರನಿಗೂ ವೈಯಕ್ತಿಕವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಶತಾಯುಷಿ ಮತದಾರರ ಬಗ್ಗೆ ಮರು ಪರಿಶೀಲನೆ ನಡೆಸಿ ಡಿ. 23 ರ ಸಂಜೆಯೊಳಗೆ ಮಾಹಿತಿ ಸಲ್ಲಿಸಬೇಕು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆಯನ್ನು ಮತ್ತೊಮ್ಮೆ ಕರೆದು ಬಿಎಲ್ಎ ಗಳನ್ನು ನೇಮಿಸಲು ತಿಳಿಸುವಂತೆ ನಿರ್ದೇಶನ ನೀಡಿದರು.
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಕಾಲಾವಕಾಶ ಮುಕ್ತಾಯಗೊಂಡ ನಂತರ ಸ್ವೀಕೃತಗೊಂಡ ನಮೂನೆ 6, 7, 8 ಮತ್ತು 8 ಎ ಗಳನ್ನು ನಿರಂತರ ಪರಿಷ್ಕರಣೆ ಅವಧಿಯಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.
ನಿಗದಿತ ಅವಧಿಯಲ್ಲಿ ಇಆರ್ ಓ ನೆಟ್ ತಂತ್ರಾಂಶದಲ್ಲಿ ಬರುವ ಎನ್.ವಿ.ಎಸ್.ಪಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಯಮಾನುಸಾರ ವಿಲೇವಾರಿ ಮಾಡುವಂತೆ ತಿಳಿಸಿದರು.
ಆಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ್ ಕುರೇರ್, ಉಪ ವಿಭಾಗಾಧಿಕಾರಿಗಳಾದ ರವಿ ಕರನಿಂಗನವರ, ಡಾ.ಕವಿತಾ ಯೋಗಪ್ಪನವರ ಹಾಗೂ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ