ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿತರಾಗಿ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ ಶನಿವಾರ ಬೆಂಗಳೂರಿಗೆ ಆಗಮಿಸಿದರು.
ಮಧ್ಯಾಹ್ನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಕುಮಾರ ಅವರನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವಾಗತಿಸಿ, ಸಂಭ್ರಮಿಸಿದರು. ಅಲ್ಲಿಂದ ಕೆಪಿಸಿಸಿ ಕಚೇರಿವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ಶಿವಕುಮಾರ 48 ದಿನಗಳ ಸೆರೆವಾಸದ ನಂತರ ಗುರುವಾರ ಬಿಡುಗಡೆಯಾಗಿದ್ದರು. ನಿನ್ನೆ ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ ಮೊದಲಾದವರನ್ನು ಭೇಟಿ ಮಾಡಿದ್ದರು.
ಇಂದು ಮಧ್ಯಾಹ್ನ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದರು. ವಿಮಾನ ನಿಲ್ದಾಣದ ಬಳಿ ಜನಸಾಗರವೇ ಸೇರಿತ್ತು. ಅಭಿಮಾನಿಗಳು 500 ಕಿಲೋ ತೂಕದ ಸೇಬು ಹಣ್ಣಿನ ಹಾರ ತಯಾರಿಸಿ ಅರ್ಪಿಸಿದರು. ಹೂವು, ಶಾಲುಗಳಿಂದ ಗೌರವಿಸಿ ಸಂಭ್ರಮಿಸಿದರು.
ಡಿ.ಕೆ.ಶಿವಕುಮಾರ ಅವರನ್ನು ಮೆರವಣಿಗೆಯಲ್ಲಿ ಕರೆದಕೊಂಡು ಬಂದಿದ್ದರಿಂದ ಬೆಂಗಳೂರಿನ ರಸ್ತೆಗಳೆಲ್ಲ ಸಂಚಾರದಟ್ಟಣೆಯಿಂದ ತುಂಬಿತ್ತು. ವಾಹನಗಳು ಸಾಲುಹಚ್ಚಿ ನಿಂತಿದ್ದವು. ಮಾಜಿ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ ತಮ್ಮ ಪವರ್ ತೋರಿಸಲು ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡರು. ತನ್ಮೂಲಕ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಸ್ಪಷ್ಟ ಸಂದೇಶ ನೀಡಿದರು.
ಜೈಲಿನಲ್ಲಿದ್ದು ಬಂದರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಲಿಲ್ಲ. ಪಕ್ಷದ ಒಳಗಾಗಲಿ ಹೊರಗಾಗಲಿ ಅವರಿಗಿರುವ ಪ್ರೀತಿ, ಗೌರವ ಕಡಿಮೆಯಾಗಲಿಲ್ಲ ಎನ್ನುವುದನ್ನು ತೋರಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸಧ್ಯವೇ ಪ್ರಭಾವಿ ಹುದ್ದೆಯೊಂದನ್ನು ನೀಡಲಾಗುತ್ತದೆ ಎನ್ನಲಾಗುತ್ತಿದೆ.
ಬೆಳಗಾವಿ ಶಾಸಕಿ, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ ಅವರನ್ನು ಸ್ವಾಗತಿಸಿದರು.
ಡಿ.ಕೆ.ಶಿವಕುಮಾರ ಅದ್ಧೂರಿ ಸ್ವಾಗತಕ್ಕೆ ಅಭಿಮಾನಿಗಳು ಸಜ್ಜು
ಡಿ.ಕೆ.ಶಿವಕುಮಾರ್ ಗೆ ಜಾಮೀನು; ಇಂದೇ ಬಿಡುಗಡೆ ನಿರೀಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ