Belagavi NewsBelgaum NewsKarnataka News

*ಅಂಚೆ ಚೀಟಿಗಳ ಮಹತ್ವ, ಇತಿಹಾಸ ತಿಳಿಯುವುದು ಅವಶ್ಯ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಅಂಚೆ ಚೀಟಿಗಳು ಸೇರಿದಂತೆ ವಿಶ್ವದ ಎಲ್ಲ ದೇಶಗಳ ಅಂಚೆ ಚೀಟಿಗಳ ಮಹತ್ವ ಹಾಗೂ ಅದರ ಇತಿಹಾಸ ತಿಳಿದುಕೊಳ್ಳುವುದು ಇಂದಿನ ಯುವಪೀಳಿಗೆಗೆ ಅವಶ್ಯಕವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ನುಡಿದರು.

ನಗರದ ಮಹಾವೀರ ಭವನದಲ್ಲಿ ಬುಧವಾರ (ಜ.8) ಜರುಗಿದ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಅಂಚೆ ಇಲಾಖೆ ವತಿಯಿಂದ ದೇಶದ ಅನೇಕ ಮಹನೀಯರ, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಗಣ್ಯರ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಲಾಗಿದೆ. ಇವುಗಳ ಇತಿಹಾಸ ಅರಿಯುವುದರಿಂದ ದೇಶಕ್ಕೆ ಗಣ್ಯರು, ಮಹನೀಯರು ನೀಡಿದಂತಹ ಕೊಡುಗೆಯನ್ನು ಸ್ಮರಿಸಬಹುದಾಗಿದೆ ಎಂದರು.

ಅಂಚೆ ಇಲಾಖೆಯಿಂದ ನಡೆಸಲಾಗುವ ರಸಪ್ರಶ್ನೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂದಿನ ವಿಧ್ಯಾರ್ಥಿಗಳು ಭಾಗವಹಿಸುವದರ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಪಡಿಸಿಕೊಳ್ಳಬಹುದಾಗಿದೆ. ಅಂಚೆ ಚೀಟಿಗಳ ಸಂಗ್ರಹವು ಒಂದು ಉತ್ತಮ ಹವ್ಯಾಸವಾಗಿದ್ದು ವಿಧ್ಯಾರ್ಥಿಗಳು ಈಗಿನಿಂದಲೇ ದೇಶ, ವಿದೇಶಗಳ ಅಂಚೆ ಚೀಟಿಗಳ ಸಂಗ್ರಹ ಮಾಡುವದರ ಕುರಿತು ಆಸಕ್ತಿ ವಹಿಸಿಕೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ವಿಧ್ಯಾರ್ಥಿಗಳಿಗೆ ಕರೇ ನೀಡಿದರು.

ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾದ ಎಸ್. ರಾಜೇಂದ್ರ ಕುಮಾರ್ ಅವರು ಮಾತನಾಡಿ ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೇಸ್ ಅಧಿವೇಶನದ ನೆನಪುಗಳನ್ನು ಮೆಲಕು ಹಾಕಿದರು. ಇಂದಿನ ಆಧುನಿಕ ಯುಗದಲ್ಲಿ ಓದುವ, ಅಂಚೆ ಚೀಟಿ ಸಂಗ್ರಹ ಸೇರಿದಂತೆ ವಿವಿಧ ಹವ್ಯಾಸಗಳಿಂದ ಯುವಪೀಳಿಗೆ ದೂರಾಗುತ್ತಿರುವದು ಕಳವಳಕಾರಿಯಾದಂತಹ ಸಂಗತಿಯಾಗಿದೆ.

ಇಂದಿನ ಯುವಜನರು ವೈವಿದ್ಯಮಯ ಅಂಚೆ ಚೀಟಿ ಸಂಗ್ರಹದಂತಹ ಹವ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಪುಸ್ತಕಗಳನ್ನು ಓದುವದರ ಮೂಲಕ ತಮ್ಮ ಜ್ಞಾನವೃದ್ಧಿ ಬೆಳೆಸಿಕೊಳ್ಳಬೇಕು. ಇಂದು ಹವ್ಯಾಸಗಳ ರಾಜ ನೆಂದೇ ಪ್ರಖ್ಯಾತಿ ಪಡೆದ ಅಂಚೆ ಚೀಟಿಗಳ ಪ್ರದರ್ಶನ ನಡೆಯುತ್ತಿರುವುದು ಅದರಲ್ಲೂ ಇಲ್ಲಿನ ಪ್ರಮುಖ ಬೆಳೆ ಕಟ್ಟಿನ ಹೆಸರಿನಲ್ಲಿ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ ವೆಂದು ರಾಜೇಂದ್ರ ಕುಮಾರ ರವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್, ಉತ್ತರ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕರಾದ ತಾರಾ ಪಾಲ್ಗೊಂಡಿದ್ದರು. ಅಂಚೆ ಅಧಿಕ್ಷಕ ರಾದ ವಿಜಯ ವಾದೋನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಕ್ಕೋಡಿಯ ಅಂಚೆ ಅಧಿಕ್ಷಕರಾದ ವಿಜಯ ಬಾದಾಮಿ ಸ್ವಾಗತಿಸಿದರು. ಗೋಕಾಕ್‌ ಅಂಚೆ ಅಧಿಕ್ಷಕ ರಮೇಶ್ ಕಾಮತೆ ವಂದಿಸಿದರು. ಶೃತಿ ನಿರೂಪಿಸಿದರು. ಇದೆ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದನಗೌಡ ಮೋಡಗಿ ಹಾಗೂ ರೈತರಾದ ಶಿವಾನಂದ ಸುಳದಾಳ್, ಪ್ರಕಾಶ್ ಕುಲಕರ್ಣಿ, ಮಾರುತಿ ಚವಾನ್ ರವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯ ವೇದಿಕೆಯಲ್ಲಿ ಇಕ್ಷು ಪೆಕ್ಸ್ ನ ಮ್ಯಾಸ್ಕಾಟ್ ಸಂಪರ್ಕ್ ನ ಕುರಿತಾಗಿ ವಾಹಿತ ವಿಶೇಷ ಲಕೋಟೆ, ಬೆಳ್ಳಿ ಹಬ್ಬ ಆಚರಿಸುತ್ತಿರುವ ಸತೀಶ್ ಸುಗರ್ಸ್ ನ ಕುರಿತಾದ ವಿಶೇಷ ಅಂಚೆ ಲಕೋಟೆ ಗಳನ್ನು, ಗೋಕಾಕ್ ಜಲಪಾತ ಶಾಶ್ವತ ಚಿತ್ರಾತ್ಮಕ ಅಂಚೆ ಮುದ್ರೆ, ಆದಿನಾಥ್ ತೀರ್ಥಂಕರ ಇಕ್ಷುರಸ ಸೇವನೆ ಮತ್ತು ಭಾರತದ ಅದಿವಾಸಿಗಳ ಕುರಿತಾದ ಮುಡ್ರಿತ ಅಂಚೆ ಕಾರ್ಡ್ ಗಳನ್ನು ಬಿಡುಗಡೆ ಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಪ್ರಖ್ಯಾತ ಅಂಚೆ ಚೀಟಿ ಸಂಗ್ರಹಕರಾದ ಏನ್ ಶ್ರೀದೇವಿ ಯವರ ರಚಿಸಿದ ಬುದ್ಧನ ಕುರಿತಾದ ಅಂಚೆ ಜಗತ್ತನ್ನು ಪರಿಚಯಿಸುವ ‘ಸಾಗ ಆಫ್ ಬುದ್ದಿಸ್ಟ್’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button