Politics

*ನಕ್ಸಲ್ ಯುಗಾಂತ್ಯ?*

ಪ್ರಗತಿವಾಹಿನಿ ಸುದ್ದಿ: ಮೋಸ್ಟ್ ವಾಂಟೆಡ್ 6 ನಕ್ಸಲರು ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಗತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ 6 ನಕ್ಸಲರು ಶರಣಾಗಿದ್ದಾರೆ.

ನಕ್ಸಲರ ಶರಣಾಗತಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಹಿಂಸಾಮಾರ್ಗವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ನಿರ್ಧರಿಸಿರುವ ನಕ್ಸಲ್ ಚಳುವಳಿಗಾರರನ್ನು ಸ್ವಾಗತಿಸುತ್ತೇನೆ. ಇವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಲಿದೆ. ಇವರ ವಿರುದ್ದದ ಪ್ರಕರಣಗಳ ಶೀಘ್ರ ಇತ್ಯರ್ಥ್ಕಕ್ಕೆ ಅಗತ್ಯವಾದ ಕ್ರಮಗಳನ್ನೂ ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದರು.

ಸಿಎಂ ಮಾತಿನ ಪ್ರಮುಖಾಂಶಗಳು:

• ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ.
• ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ , ನ್ಯಾಯಯುತವಾಗಿ ಮಾಡಬೇಕು.
• ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ.
• ಈ ಹಿಂದೆಯೂ ಬಹಳ ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಮುಖ್ಯಧಾರೆಗೆ ಬಂದಿದ್ದಾರೆ. ಇವರ ಪುನರ್‌ ವಸತಿಗೆ ಸರ್ಕಾರ ನೆರವು ಒದಗಿಸಿದೆ.
• ಶಾಂತಿಗಾಗಿ ನಾಗರಿಕ ವೇದಿಕೆಯವರು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ.
• ನಾವು ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು, ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಬೇಕೋ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ.
• ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲಿ, ಸಂವಿಧಾನದಲ್ಲಿ‌ ಅವಕಾಶವಿಲ್ಲ.
• ಶಾಂತಿಯುತವಾಗಿ ಹೋರಾಟ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಇದನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ.
• ಅನ್ಯಾಯ ಕಡಿಮೆ ಮಾಡಲು ನಮ್ಮ ಸರ್ಕಾರ ಬಹಳ ಪ್ರಯತ್ನ ಮಾಡುತ್ತಿದೆ. ಯಾರ ಮೇಲೆಯೂ ಅನ್ಯಾಯ ಆಗಬಾರದು ಎಂಬುವುದು ನಮ್ಮ ಧ್ಯೇಯ.
• ಬಡವರ ಹಕ್ಕುಗಳ ರಕ್ಷಣೆಗಾಗಿ ಅವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬರಲು ಅನೇಕ ಕಾರ್ಯಕ್ರಮ ಜಾರಿ ಮಾಡಿದೆ. ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ ಯೋಜನೆ ಉದ್ದೇಶ ಇದೇ ಆಗಿದೆ. ಗೌರವಯುತವಾಗಿ ಬಡವರು ಬದುಕಲು ಅವಕಾಶ ಇದರಿಂದ ಸಿಗಲಿದೆ. ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬದುಕಲು ಶಕ್ತಿ ಬಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ.
• ನಕ್ಸಲಿಸಂ ರಹಿತವಾದ ಮುಕ್ತವಾದ ಸಮಾಜ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲಿಯರಿಗೆ ಎಲ್ಲಾ ರೀತಿಯ ನೆರವು ಬಹಿರಂಗವಾಗಿ ಹೇಳಿದ್ದೆ. ನಿಮಮ್ಮನ್ನು ಕ್ರಿಮಿನಲ್‌ಗಳ ರೀತಿ ನೋಡದೆ, ಮಾನವರಂತೆ ನೋಡುವ ಭರವಸೆ ನೀಡಿದ್ದೆ.
• ನಕ್ಸಲೀಯರ ಶರಣಾಗತಿಯಲ್ಲಿ ಸಮಿತಿಯ ಸದಸ್ಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಬಯಸುತ್ತೇನೆ.

ಸುನೀಲ್ ಕುಮಾರ್ ಗೆ ತಿವಿದ ಸಿಎಂ

ಹಿಂಸಾಮಾರ್ಗವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ನಿರ್ಧರಿಸಿರುವ ನಕ್ಸಲ್ ಚಳುವಳಿಗಾರರನ್ನು ಸ್ವಾಗತಿಸುತ್ತೇನೆ. ಇವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಲಿದೆ. ಇವರ ವಿರುದ್ದದ ಪ್ರಕರಣಗಳ ಶೀಘ್ರ ಇತ್ಯರ್ಥ್ಕಕ್ಕೆ ಅಗತ್ಯವಾದ ಕ್ರಮಗಳನ್ನೂ ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಅನ್ಯಾಯ-ಶೋಷಣೆ ವಿರುದ್ದದ ಪ್ರಜಾಸತ್ತಾತ್ಮಕವಾಗಿ ನಡೆಸುವ ಹೋರಾಟವನ್ನು ನಾನು ಸದಾ ಗೌರವಿಸುತ್ತಾ ಬಂದವನು.ನಮ್ಮ ಸಂವಿಧಾನದಲ್ಲಿಯೂ ಇದಕ್ಕೆ ಅವಕಾಶ ಇದೆ.ಕಾಡಿನಲ್ಲಿದ್ದುಕೊಂಡು ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ನಡೆಸುತ್ತಿದ್ದ ನಕ್ಸಲರು ಮನವೊಲಿಸಿ ಅವರನ್ನು ನಾಡಿಗೆ ಕರೆದು ತರುವ ಪ್ರಯತ್ನವನ್ನು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿಯೇ ನಮ್ಮ ಸರ್ಕಾರ ಪ್ರಾರಂಭಿಸಿತ್ತು. ಕಳೆದ ಅವಧಿಯಲ್ಲಿ ಹನ್ನೆರಡು ಮಂದಿ ನಕ್ಸಲರು ಶರಣಾಗಿ ಬಂದು ಮುಖ್ಯವಾಹಿನಿ ಸೇರಿಕೊಂಡಿದ್ದರು. ಇದೀಗ ಆರು ಮಂದಿ ನಕ್ಸಲರು ಬಂದಿದ್ದಾರೆ.

ಶರಣಾಗಿರುವ ನಕ್ಸಲರು . ಮುಂದಿನ ದಿನಗಳಲ್ಲಿ ಇವರೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಬದುಕನ್ನು ಕಳೆಯಲಿದ್ದಾರೆ ಎಂಬ ನಂಬಿಕೆ ನನಗಿದೆ. ಈ ಆರು ಮಂದಿ ನಕ್ಸಲೀಯರ ಶರಣಾಗತಿಯ ನಂತರ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂಬ ವಿಶ್ವಾಸ ನನಗಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸಿದ ಪುನರ್ವಸತಿ ಸಮಿತಿ ಸದಸ್ಯರು ಮತ್ತಿತರ ಸಾಮಾಜಿಕ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಯಾಕೆ ಬೆಚ್ಚಿ ಬಿದ್ದಿಲ್ಲ? : ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಳೆದ ತಿಂಗಳು ಚತ್ತೀಸ್ ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಹಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಟ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ ಎಂದು ಕೇಳಬೇಕಾಗಿದೆ. ಶಹಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ?

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಅವರಿಗೆ ಇದೆಯೇ?

ಶರಣಾಗಿರುವ ಈ ನಕ್ಸಲೀಯರ ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ.

ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ನಕ್ಸಲ್ ಮುಕ್ತ: ಡಿಸಿಎಂ ಡಿ. ಕೆ. ಶಿವಕುಮಾರ್

“ಆರು ಮಂದಿ ನಕ್ಸಲರು ಶರಣಾಗುವುದರ ಮೂಲಕ ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ನಕ್ಸಲ್ ಮುಕ್ತವಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರ ಶರಣಾಗತಿಯಾದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

“ಸರ್ಕಾರ, ಪೊಲೀಸ್ ಅಧಿಕಾರಿಗಳ ಹಾಗೂ ಸರ್ಕಾರ ರಚನೆ ಮಾಡಿದ್ದ ಶಾಂತಿ ಪಾಲನ ಸಮಿತಿಯ ಫಲದಿಂದ ಈ ಕಾರ್ಯ ಯಶಸ್ವಿಯಾಗಿದೆ. ತಮಿಳುನಾಡಿನ ಮತ್ತು ಕೇರಳ ರಾಜ್ಯದಿಂದ ಇಬ್ಬರು, ಕರ್ನಾಟಕದ ನಾಲ್ಕು ಮಂದಿ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟು ಶರಣಾಗಿರುವುದು ಸಂತಸ ತಂದಿದೆ. ಎಲ್ಲರ ಪರಿಶ್ರಮದಿಂದ ಅವರೆಲ್ಲಾ ಮುಂದೆ ಬಂದು ಶರಣಾಗಿದ್ದಾರೆ” ಎಂದು ಹೇಳಿದರು.

“ನಾವು ಶರಣಾದ ನಕ್ಸಲರ ಎಲ್ಲಾ ಬೇಡಿಕೆಗಳನ್ನು ಗೌರವಿಸುತ್ತೇವೆ. ತಮಿಳುನಾಡಿನ ಒಬ್ಬರು ಬಿ. ಟೆಕ್ ಪದವಿ ಪಡೆದಿದ್ದಾರೆ” ಎಂದರು.

ಬಿಜೆಪಿ ಸರ್ಕಾರದ ಈ ನಡೆಯನ್ನು ಟೀಕಿಸಿದೆ ಎಂದು ಕೇಳಿದಾಗ, “ಕೇವಲ ಟೀಕೆ ಮಾಡುವುದೇ ಅವರ ಕೆಲಸ. ಪರಿಸ್ಥಿತಿಯ ಲಾಭ ಪಡೆಯುವುದೇ ಅವರು ಯಾವಾಗಲೂ ಮಾಡುವ ಕೆಲಸ. ನಾವು ಹೃದಯದಿಂದ ಅವರ ಬಳಿ ಶರಣಾಗಿ ಎಂದು ಕೇಳಿಕೊಂಡೆವು. ನಮ್ಮ ಮುಖ್ಯಮಂತ್ರಿಗಳು ಸಹ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಕಾರಣಕ್ಕೆ ಶರಣಾಗಿದ್ದಾರೆ. ಮಹಾತ್ಮಾ ಗಾಂಧಿ ಅವರು ಒಂದು ಮಾತು ಹೇಳಿದ್ದಾರೆ. ‘ನೀನು ನಿನ್ನನ್ನೇ ನಿಯಂತ್ರಣ ಮಾಡಿಕೊಳ್ಳಲು ಮಿದುಳನ್ನು ಉಪಯೋಗಿಸು. ಇತರರ ಮನಸ್ಸು ಗೆಲ್ಲಬೇಕಾದರೆ ಹೃದಯದಿಂದ ಕೆಲಸ ಮಾಡು’ ಎಂದಿದ್ದಾರೆ. ನಮ್ಮ ಸರ್ಕಾರ ಹೃದಯದಿಂದ ಕೆಲಸ ಮಾಡಿದೆ” ಎಂದರು.

“ನಮ್ಮ ಸರ್ಕಾರ ಸಂವಿಧಾನತ್ಮಕವಾಗಿ ನಡೆದುಕೊಂಡಿದೆ. ಕಾನೂನಿನ ಅಡಿಯಲ್ಲಿಯೇ ನಾವು ಕೆಲಸ ಮಾಡಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಶರಣಾದ ನಕ್ಸಲರಿಗೆ ಸಂವಿಧಾನದ ಪುಸ್ತಕದ ಪ್ರತಿಯನ್ನು ನೀಡಿದ್ದಾರೆ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button