Belagavi NewsBelgaum News

*ಬಜೆಟ್ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡಲು ಒತ್ತಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಿತ್ತೂರು ಕರ್ನಟಕ ಭಾಗದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. 

ಇಂದು ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕಿತ್ತೂರು ಕರ್ನಾಟಕ ಸೇನೆಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. 

ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ ವಿಶೇಷ ಅನುದಾನ ಒದಗಿಸಬೇಕು.‌ವಾಯವ್ಯ ಸಾರಿಗೆ ಸಂಸ್ಥೆಯ ಹೆಸರನ್ನು ಕಿತ್ತೂರು ಕರ್ನಾಟಕ ಸಾರಿಗೆ ಎಂದು ಮರುನಾಮಕರಣ ಮಾಡಬೇಕು.‌ಕಿತ್ತೂರು ಕರ್ನಾಟಕ ಭಾಗದಲ್ಲಿರುವ ಐಟಿ/ಬಿಟಿ ಮತ್ತು ಜವಳಿ ಪಾರ್ಕಗಳನ್ನು ನಿರ್ಮಿಸಿ ವಿಶೇಷ ಅನುದಾನ ನೀಡಿಬೇಕು. ಸುವರ್ಣ ವಿಧಾನ ಸೌಧಕ್ಕೆ ವಿಭಾಗೀಯ ಕಛೇರಿಗಳನ್ನು ಸ್ಥಳಾಂತರಗೊಳಿಸಿ ಈ ಭಾಗದ ಜನಸಾಮನ್ಯರು ಬೆಂಗಳೂರು ಅಲೆದಾಡುವುದನ್ನು ತಪ್ಪಿಸಬೇಕು. ಕೃಷ್ಣಾ ಮತ್ತು ಮಹಾದಾಯಿ ನದಿಗಳಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಅನುದಾನ ಒದಗಿಸಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕರ್ನಾಟಕ ಲಾಂಛನದಲ್ಲಿರುವ “ಸತ್ಯಮೇವ ಜಯತೆ” ವಾಕ್ಯವನ್ನು ಹಿಂದಿಯಿಂದ ಕನ್ನಡಕ್ಕೆ ಬದಲಾಯಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಿತ್ತೂರು ಕರ್ನಾಟಕ ಭಾಗದ ಪ್ರತಿಯೊಂದು ತಾಲೂಕಿನಲ್ಲೂ ಐಟಿಐ, ಡಿಪ್ಲೋಮಾ ಪದವಿ ಮತ್ತು ಕಾನೂನು ಕಾಲೇಜುಗಳನ್ನು ಪ್ರಾರಂಭಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಸಾರಿಗೆ ಸಂಸ್ಥೆಯ ಬಸ್ಸುಗಳ ಓಡಾಡ ಕಡಿಮೆಯಾಗಿರುವುದರಿಂದ ಬಡ ವಿದ್ಯಾರ್ಥಿಗಳ ಬಹುಪಾಲು ಸಮಯ ಬಸ್ಸುಗಳ ಕಾಯುವಿಕೆಯಲ್ಲಿ ವ್ಯರ್ಥವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮೊದಲಿನ ರೀತಿಯಲ್ಲಿಯೇ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಕ್ರಮ ಜರುಗಿಸಬೇಕು. ಬೆಂಗಳೂರು ನಗರ ಮಾದರಿಯಲ್ಲಿಯೇ ಬೆಳಗಾವಿಯಿಂದ ಧಾರವಾಡ ಹುಬ್ಬಳ್ಳಿವರೆಗೆ ಮೆಟ್ರೋ ಟ್ರೇನ್ ಪ್ರಾರಂಭಿಸಲು ಯೋಜನೆಗಳನ್ನು ರೂಪಿಸಬೇಕು. ಬೆಳಗಾವಿ ನಗರದ ಸಂಚಾರ ದಟ್ಟನೆಯನ್ನು ಕಡಿತಗೊಳಿಸಲು ಮತ್ತು ಭಾರಿವಾಹನಗಳ ಸಂಚಾರ ನಿಯಂತ್ರಿಸಲು ವರ್ತುಲ ರಸ್ತೆ (ರಿಂಗ್ ರೋಡ) ಮೇಲ್ಲೇತುವೆ ರಸ್ತೆಗಳನ್ನು ನಿರ್ಮಿಸಲು ಸೂಕ್ತ ಕ್ರಮ ಜರುಗಿಸಲು ಮುಂಬರುವ ಬಜೆಟ್ ಅಧಿವೇಶನದಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button