ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಉತ್ತರ ಕರ್ನಾಟಕ ಸ್ವಾಭಿಮಾನದ ಭೂಮಿ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಹೇಳಿದರು.
ಬುಧವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು.
ಉತ್ತರ ಕರ್ನಾಟಕದವರು ವಿಧಾನ ಸೌಧಕ್ಕೆ ಬರುವುದು ತಮ್ಮ ಮಕ್ಕಳ ನೌಕರಿ ಸಲುವಾಗಿ. ಪದೇ ಪದೇ ಬೆಂಗಳೂರಿಗೆ ಬಂದು ಹೋಗಿ ಕೊನೆಗೆ ಆ ಆಸೆಯನ್ನು ಕೈ ಬಿಡುತ್ತಾರೆ. ನಮ್ಮ ಭಾಗದ ಯುವಕರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವಲ್ಲಿ ಸೇವೆ ಮಾಡುವೆ ಎಂದರು.
.
ಬೆಳಗಾವಿಯಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಯಾಗಿದೆ. ಇತ್ತೀಚೆಗೆ ಭೇಟಿ ನೀಡಿದಾಗ ಅಲ್ಲಿನ ಅರಾಜಕತೆ ಕಂಡು ದಂಗಾದೆ. ಅದನ್ನು ಸರಿಪಡಿಸುವುದು ದೊಡ್ಡ ಸವಾಲಾಗಿದೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಮುಖ ಸರಕಾರಿ ಕಚೇರಿಗಳು ಬೆಳಗಾವಿ ಸುವರ್ಣವಿಧಾನ ಸೌಧಕ್ಕೆ ಬರಬೇಕು. ಸಿಎಂ ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಮನವಿ ಮಾಡಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಶಂಕರಗೌಡ ಪಾಟೀಲರು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಶಂಕರಗೌಡ ಪಾಟೀಲರು ನೇರವಾಗಿರುವ ವ್ಯಕ್ತಿ. ಅಭಿವೃದ್ಧಿ ಜತೆಗೆ ಇನ್ನೂ ಹೆಚ್ಚಿನ ಕಾರ್ಯ ಮಾಡಲಿ. ಮಠ ಇರುವುದು ಮಠಾಧೀಶರಿಗಲ್ಲ. ಭಕ್ತರಿಗಾಗಿ ಅವರು ಮಠದ ಭಕ್ತರು. ಸಿಎಂ ಕಾರ್ಯದರ್ಶಿ ಜತೆಗೆ ಇನ್ನೂ ಹೆಚ್ಚಿನ ಹುದ್ದೆ ಸಿಗಲಿ ಎಂದು ಶುಭ ಹಾರೈಸಿದರು.
ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸವಡಿ, ಅರವಿಂದ ಪಾಟೀಲ, ಸಿದ್ದಲಿಂಗಸ್ವಾಮಿ ಕುಲಕರ್ಣಿ, ಸೋಮಶೇಖರ ಹಿರೇಮಠ, ಡಾ. ನಂದಿಶ ಪಾಟೀಲ, ರಾಜು ಪಡಗೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ