ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2025 ಕ್ಕೆ ಸಂಗೊಳ್ಳಿಯಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ಸಂಗೊಳ್ಳಿಯ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು. ಬೈಲಹೊಂಗಲ ಶಾಸಕರಾಗಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು, ಜ್ಯೋತಿಯನ್ನು ಸ್ವಾಗತಿಸಿದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಅವರು ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಇದಾದ ಬಳಿಕ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ಕುಂಭ ಜೊತ್ತ ಮಹಿಳೆಯರು, ಪೂಜಾಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆಕುಣಿತ, ಸೇರಿದಂತೆ ವಿವಿಧ ಕಲಾತಂಡಗಳು ಉತ್ಸವಕ್ಕೆ ಮೆರುಗು ತಂದವು.
ಸಂಗೊಳ್ಳಿರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಲಾತಂಡಗಳ ವಾದ್ಯಗಳ ಕರತಾಡನ, ನೃತ್ಯದ ಸೊಬಗು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉ ನಿರ್ದೇಶಕರಾದ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಹನುಮಂತ ಶಿರಹಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ