Belagavi NewsBelgaum News

*ಮಾತಂಗಿ ದೀವಟಿಗೆ ಚಿತ್ರ ಪ್ರದರ್ಶನ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಡಿ ಎಸ್ ಚೌಗಲೆ ಅವರು ನಾಟಕ, ಸಾಹಿತ್ಯ, ಕಲೆ ಮತ್ತು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿದವರು.ಈಗ ದೊಡ್ಡ ನಟರಾಗಿ ಅಭಿನಯದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ ಎಂದು ಸಾಹಿತಿ ಡಾ. ಸರಜೂ ಕಾಟ್ಕರ್ ಅಭಿಪ್ರಾಯ ಪಟ್ಟರು. ಅವರು ಕನ್ನಡ ಭವನ ಆಯೋಜಿಸಿದ ಡಾ. ಡಿ ಎಸ್ ಚೌಗಲೆ ಅಭಿನಯಿಸಿದ ಹಾಗೂ ಡಾ. ಸಮತಾ ದೇಶಮಾನೆ ಅವರ ಆತ್ಮಕತೆ ಆಧರಿಸಿದ ‘ಮಾತಂಗಿ ದೀವಟಿಗೆ’ ಚಿತ್ರ ಪ್ರದರ್ಶನ ದ ಉದ್ಘಾಟಿನೆ ನೆರವೇರಿಸಿ ಮಾತನಾಡಿದರು.


ಈ ಚಿತ್ರ ಕಲಬುರಗಿಯ ದೇಶಮಾನೆ ಎಂಬ ದಲಿತ ಮನೆತನದ ಹೋರಾಟದ ಕತೆ ಹೊಂದಿದೆ. ಕಥಾ ನಾಯಕ ಬಾಬುರಾವ ದೇಶಮಾನೆ ಮತ್ತು ಆತನ ಮಡದಿ ರತ್ನ ಸಂಕಷ್ಟಗಳನ್ನು ಎದುರಿಸಿ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಥನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಹಲವಾರು ರಾಷ್ಟ್ರೀಯ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಇದು ಪ್ರದರ್ಶನ ಕಂಡಿದೆ ಎಂದರು.


ಚಿತ್ರ ಪ್ರದರ್ಶನ ನಂತರ ಸಂವಾದದಲ್ಲಿ-‘ಯಾವುದೇ ಸಿನಿಮಾ ಅಥವಾ ನಾಟಕ ವೀಕ್ಷಿಸಿದ ಕೊನೆಗೆ ಪ್ರೇಕ್ಷಕರಲ್ಲಿ ಸಂತೋಷ, ಸಂತೃಪ್ತಿ ಮತ್ತು ಸಮಾಧಾನದ ಅನುಭವ ಮೂಡಿರಬೇಕು. ಈ ಗುಣ ಮಾತಂಗಿ ದೀವಟಿಗೆ ಚಿತ್ರದಲ್ಲಿದೆ’ಎಂದು ಪ್ರೊ. ಶಿವಪ್ಪ ದಳವಾಯಿ ಹೇಳಿದರು. ಅನುರಾಧ ಕಾಪಸಿಯವರು ಮಾತನಾಡಿ, ‘ಅಂದು ದಲಿತ ಸಮುದಾಯದ ಬಾಬುರಾವ ಮಕ್ಕಳಿಗೆ ಶಿಕ್ಷಣ ನೀಡಲು ಪಡುವ ಕಷ್ಟ ಕಂಡರೆ ಮೀಸಲಾತಿಯ ಅಗತ್ಯವಿದೆ ಎಂದನಿಸುತ್ತದೆ’ ಎಂದರು.


ಪ್ರೊ. ಟಿ. ವೆಂಕಟೇಶ ಮಾತನಾಡಿ, ‘ನಾನಿನ್ನೂ ಈ ಚಿತ್ರದ ಪ್ರಭಾವದಿಂದ ಹೊರಬರಲಾಗಿಲ್ಲ. ಕೆಲವು ದೃಶ್ಯಗಳು ಇನ್ನೂ ಅಚ್ಚಳಿಯದೇ ಉಳಿದಿವೆ ಎಂದರು. ಪ್ರೊ. ಬಿ ಎಸ್ ಗವಿಮಠ, ‘ಚೌಗಲೆ ಅವರು ಒಬ್ಬ ದೇಶಿ ಪ್ರತಿಭೆ. ಅದು ಅಭಿನಯದಲ್ಲಿ ಅನಾವರಣಗೊಂಡಿದೆ’ ಎಂದರು. ಶ್ರೀಮತಿ ಬಟ್ಟಲ ಅವರು, ‘ದಲಿತ ಸಮುದಾಯದ ಮನೆ ಒಡೆಯ ಶಿಕ್ಷಣ ನೀಡಲು ಪಡುವ ಸಂಕಷ್ಟ ಮತ್ತು ಅದನ್ನು ಗೆಲ್ಲುವ ಬಾಬುರಾವರ ಬದುಕಿನ ಸಂಘರ್ಷ ಗಟ್ಟಿಯಾಗಿ ಮೂಡಿದೆ’ ಎಂದರು. ಡಾ. ಪಿ. ಜಿ. ಕೆಂಪಣ್ಣವರ, ‘ನಾಟಕಕಾರರಾದ ಚೌಗಲೆ ಅವರು ಸಲೀಸಾಗಿ ನಟಿಸಲು ಅವರ ರಂಗಾನುಭವ ನೆರವಿಗೆ ಬಂದಿದೆ’ ಎಂದು ನುಡಿದರು.


ದೇಶಮಾನೆ ಮನೆತನದ ಪ್ರೊ. ಜಯಶ್ರೀ ದೇಶಮಾನೆ ಉಪಸ್ಥಿತರಿದ್ದರು. ಡಾ. ಡಿ. ಎಸ್ ಚೌಗಲೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕ ಮಂಜು ಪಾಂಡವಪುರ ತಮ್ಮ ಚಿತ್ರೀಕರಣದ ಅನುಭವ ಹಂಚಿಕೊಂಡರು.


ಡಾ. ವೈ. ಬಿ. ಹಿಮ್ಮಡಿ, ಡಾ. ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಯ. ರು. ಪಾಟೀಲ, ಪ್ರೊ. ರಾಮಕೃಷ್ಣ ಮರಾಠೆ, ಪ್ರೊ.ಎ.ಬಿ.ಘಾಟಗೆ, ಪ್ರೊ. ಎ. ಎ. ಘೋರ್ಪಡೆ, ಡಾ. ಎಂ. ಎಂ. ಜಾಧವ, ನ್ಯಾಯವಾದಿ ಜಗದೀಶ ಪಾಟೀಲ, ಜಗದೀಶ್ ಹೊಸಮನಿ, ಮಹಿಳಾ ಸಂಘಟನೆಯ ಶೈಲಜಾ ಭಿಂಗೆ, ಸರ್ವ ಮಂಗಳ ಅರಳಿಮಟ್ಟಿ, ಲೇಖಕಿ ಪಾರ್ವತಿ ಪಿಟಗಿ, ಹೇಮಾ ಸೋನವಳಕರ, ಜ್ಯೋತಿ ಬದಾಮಿ ಸೇರಿದಂತೆ ೨೦೦ ಕ್ಕೂ ಅಧಿಕ ಪ್ರೇಕ್ಷಕರು ಚಿತ್ರ ವೀಕ್ಷಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button