ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಟೀಕಾಪ್ರಹಾರ ನಡೆಸಿದ್ದ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ರಮೇಶ್ ಜಾರಕಿಹೊಳಿ ಅವರಿಗೆ ನಾಲಿಗೆ ಮೇಲೆ ಹಿಡಿತವಿರಲಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ಅವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಈ ರಾಜ್ಯ ಕಂಡ ಓರ್ವ ಮುತ್ಸದ್ದಿ ರಾಜಕಾರಣಿ. ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯಾದ್ಯಂತ ಸುತ್ತಾಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ರಮೇಶ್ ಜಾರಕಿಹೊಳಿ ಇತ್ತೀಚೆಗೆ ಬಂದವರು. ಇನ್ನು ನನ್ನ ಬಗ್ಗೆ ಮಾತನಾಡುವಾಗಲು ನಿಗಾ ಇರಲಿ. ನಾನು ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೇನೆ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ರಮೇಶ್ ಜಾರಕಿಹೊಳಿ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ದೆಹಲಿ ಮಟ್ಟದಲ್ಲಿ ನಾಯಕರೊಂದಿಗೆ ಮಾತನಾಡಲಿ. ನಾನು ಕೂಡ ಅಲ್ಲಿಯೇ ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ