*ಬೆಳಗಾವಿಯಲ್ಲಿ ಶನಿವಾರ ಮಾತೃಶಕ್ತಿ ವಂದನಾ- ಮಾತೃಸಂಗಮ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಸೇವಾ ಚಟುವಟಿಕೆಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ಮಹತ್ತರವಾಗಿ ಕಾರ್ಯನಿರ್ವಹಿಸುತ್ತಿರುವ ಸೇವಾಭಾರತಿ ಟ್ರಸ್ಟ್ ರಜತ ಮಹೋತ್ಸವದ ಅಂಗವಾಗಿ ಶನಿವಾರ ನಗರದ ಅನಗೋಳದಲ್ಲಿನ ಸಂತ ಮೀರಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಾತೃಶಕ್ತಿ ವಂದನಾ – ಮಾತೃಸಂಗಮದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ ಎಂದು ಸೇವಾಭಾರತಿಯ ಟ್ರಸ್ಟ್ ಕಾರ್ಯದರ್ಶಿ ಡಾ. ರಘು ಅಕಮಂಚಿ ಹೇಳಿದರು.
ನಗರದಲ್ಲಿ ಶುಕ್ರವಾರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ೧೯೯೯ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ಸಂಸ್ಥೆ ಸೇವಾಭಾರತಿ ಟ್ರಸ್ಟ್ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗೆ ನಾನು ಕೂಡಾ ಹೊಣೆ ಎನ್ನುವ ವಿಚಾರ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿ ಬಂದಾಗ ಮಾತ್ರ ಈ ದೇಶದ ಪುನರುತ್ಥಾನ ಸಾಧ್ಯ. ಸೇವಾ ಹಿ ಪರಮೋ ಧರ್ಮ ಎಂಬ ಉಕ್ತಿ ನಮಗೆ ಪ್ರೇರಣೆ, ಸಮಾಜದಲ್ಲಿ ಒಬ್ಬನೇ ಒಬ್ಬ ದುರ್ಬಲ, ಶೋಷಿತ, ವಂಚಿತ ವ್ಯಕ್ತಿ ಇರಬಾರದು. ಆ ರೀತಿಯ ಸಮಾಜ ಸೇವಾಭಾರತಿಯ ಕನಸು ಹೊಂದಿದೆ ಎಂದು ತಿಳಿಸಿದರು.
ಬೆಳಗಾವಿಯ ಅನಗೋಳದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗುವ ಎರಡು ದಿನದ ಮಾತೃಶಕ್ತಿ ವಂದನಾ – ಮಾತೃಸಂಗಮಕ್ಕೆ ಶನಿವಾರ ಸಂಜೆ ೭:೦೦ ಗಂಟೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ರಜತ ಮಹೋತ್ಸವದ ಸಮಾರೋಪ ಸಮಿತಿಯ ಪೋಷಕರಾದ ಡಾ. ಪ್ರಭಾಕರ ಕೋರೆ ಅವರು ಚಾಲನೆ ನೀಡಲಿದ್ದಾರೆ. ನವದೆಹಲಿಯ ರಾಷ್ಟ್ರೀಯ ಸೇವಾಭಾರತಿಯ ರೇಣು ಪಾಠಕ, ಬೆಳಗಾವಿಯ ಉದ್ಯಮಿ ವಿವೇಕ ಕಮಲಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಮಾರೋಹ ಸಮಿತಿಯ ಅಧ್ಯಕ್ಷ ಮತ್ತು ಕಲ್ಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಈ ಕಾರ್ಯಕ್ರಮ ಮುನ್ನ ಸಂಜೆ ೬:೩೦ಕ್ಕೆ ಶಾಲೆಯ ಆವರಣದಲ್ಲಿ ಏರ್ಪಡಿಸಲಾದ ಸೇವಾಭಾರತಿ – ಸೇವಾ ಯಾತ್ರೆ ಪ್ರದರ್ಶಿನಿಯ ಉದ್ಘಾಟನೆ ಜರುಗಲಿದೆ.
ಸಂಜೆ ೮:೦೦ಕ್ಕೆ ಮುಖ್ಯ ವೇದಿಕೆಯಲ್ಲಿ ಪ್ರತಿಭಾ ದರ್ಶನ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ರವಿವಾರ, ೧೯ ಜನೆವರಿ ೨೦೨೫ರಂದು ಬೆಳಿಗ್ಗೆ ೯:೧೫ಕ್ಕೆ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನಾಯಕತ್ವ ವಿಷಯದ ಕುರಿತಾಗಿ ಬೆಂಗಳೂರಿನ ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ ಮತ್ತು ಸೊಲ್ಲಾಪುರದ ಉದ್ಯಮಿ ಚಂದ್ರಿಕಾ ಚವ್ಹಾಣ ಅವರು ಸಂವಾದ ಕಾರ್ಯಕ್ರಮ ನಡೆಯಲಿದೆ. ಅಂಗಡಿ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ. ಸ್ಟೂರ್ತಿ ಅಂಗಡಿ ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ವಿವರಣೆ ನೀಡಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ ಮತ್ತು ಅಂಗಡಿ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ. ಸ್ಟೂರ್ತಿ ಅಂಗಡಿ ಪಾಟೀಲ ಮಾತನಾಡಿ, ಈ ಮಾತೃ ವಂದನಾ ಕಾರ್ಯಕ್ರಮದಲ್ಲಿ ರವಿವಾರದಂದು ಧಾರವಾಡದ ಕೌಶಲ್ಯ ಅಭಿವೃದ್ಧಿ ಕೇಂದ್ರದ ಜಗದೀಶ ನಾಯ್ಕ್ ಅವರು ಮಹಿಳಾ ಸಬಲೀಕರಣ: ಸವಾಲು ಮತ್ತು ಅವಕಾಶಗಳು ವಿಷಯದ ಕುರಿತು ಮಾತನಾಡಲಿದ್ದಾರೆ. ಸಾಮಾಜಿಕ ಕಾರ್ಯಗಳು ಮತ್ತು ಮಹಿಳಾ ನಾಯಕತ್ವ ವಿಷಯದ ಕುರಿತು ಹುಬ್ಬಳ್ಳಿ ಸಾಮಾಜಿಕ ಕಾರ್ಯಕರ್ತೆ ಸ್ವಾತಿ ಪಟ್ಟೇದ ಮಾತನಾಡಲಿದ್ದಾರೆ. ಸೃಜನಾತ್ಮಕ ಕಲಿಸುವಿಕೆ ವಿಷಯದ ಕುರಿತಾಗಿ ಬೆಂಗಳೂರಿನ ಅಹೇಡ್ ಅಧ್ಯಕ್ಷೆ ಪರಿಮಳಾ ವೆಂಕಟೇಶ ಮೂರ್ತಿ ಮಾತನಾಡಲಿದ್ದಾರೆ.
ಬೆಂಗಳೂರಿನ ಮೋಟಿವೇಷನಲ್ ಸ್ಪೀಕರ್ ಡಾ. ವಿ.ಬಿ. ಆರತಿ, ಉದ್ಯಮಿ ವಿದ್ಯಾ ಮುರಕುಂಬಿ ಭಾರತೀಯ ಮಹಿಳೆ ಮತ್ತು ಆಖ್ಯಾನ ವಿಷಯದ ಕುರಿತಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ರವಿವಾರ, ಸಂಜೆ ೪:೦೦ಗಂಟೆಗೆ, ಸಮಾರೋಪ ಕಾರ್ಯಕ್ರಮದಲ್ಲಿ ನವದೆಹಲಿಯ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಅನ್ನಪೂರ್ಣದೇವಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣದ ಸಂಚಾಲಕ ಗೋಪಾಲಜಿ ಮತ್ತು ಸಂಸದ ಜಗದೀಶ ಶೆಟ್ಟರ ಅವರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ವಿವರಣೆ ನೀಡಿದರು.
ಸೇವಾಕಾರ್ಯದ ಮಾಧ್ಯಮದಿಂದ ಸಮಾಜ ಜಾಗೃತಿ, ಆ ಮುಖಾಂತರ ಸಾಮಾಜಿಕ ಪರಿವರ್ತನೆ ಇದು ಸೇವಾಭಾರತಿಯ ಧ್ಯೇಯ. ಸುಶಿಕ್ಷಿತ, ಸ್ವಸ್ಥ, ಸಮೃದ್ಧ, ಸುರಕ್ಷಿತ ಹಾಗೂ ಸಾಮಾರಸ್ಯವುಳ್ಳ ಸಮಾಜ ನಿರ್ಮಾಣ ನಮ್ಮ ಗುರಿ. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಸಂಸ್ಕಾರ, ಸ್ವಾವಲಂಬನೆ, ಸಾಮರಸ್ಯ ಈ ರೀತಿ ವಿವಿಧ ಆಯಾಮಗಳಲ್ಲಿ ಸೇವಾಭಾರತಿ ಹಲವಾರು ಪ್ರಕಲ್ಪಗಳನ್ನು ನಡೆಸುತ್ತಿದೆ. ರಜತ ಮಹೋತ್ಸವದ ನಿಮಿತ್ತ ವರ್ಷ ಪೂರ್ಣ ಮಹಿಳಾ ಸ್ವಾವಲಂಬನೆ ಮತ್ತು ಸಬಲೀಕರಣದ ಕುರಿತಾದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ಹೊಂದಿದ್ದೇವೆ ಎಂದರು.