Belagavi NewsBelgaum NewsPolitics

*ಧ್ವಜಾರೋಹಣ ನೆರವೇರಿಸಿ ಗಣರಾಜ್ಯೊತ್ಸವದ ಸಂದೇಶ ತಿಳಿಸಿದ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವರೂ ಆಗಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತ ರಾಷ್ಟ್ರವು ಗಣರಾಜ್ಯವೆಂದು 1950ರ ಜನವರಿ 26ರಂದು ಘೋಷಿಸಿಕೊಂಡಿತು. ಗಣರಾಜ್ಯೋತ್ಸವದ ಅಮೃತ ಘಳಿಗೆಯಲ್ಲಿ ಇಂದಿನ ಸಂಭ್ರಮದಲ್ಲಿ ಭಾಗಿಯಾಗಿರುವ ಎಲ್ಲ ಹಿರಿಯರು, ಕವಿ-ಸಾಹಿತಿಗಳು, ಚಿಂತಕರು, ಜಿಲ್ಲೆಯ ಎಲ್ಲ ಶಾಸಕ ಮಿತ್ರರು, ಸಂಸದರು, ಜನಪ್ರತಿನಿಧಿಗಳು, ನಾಗರಿಕರು ಮತ್ತು ಮಾಧ್ಯಮ ಸ್ನೇಹಿತರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಬೆಳಗಾವಿಯ ಈ ನೆಲವು ರಾಷ್ಟçಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲವಾಗಿದೆ. ಭಾರತ ರಾಷ್ಟ್ರವು ಗಣರಾಜ್ಯವೆಂದು 1950ರ ಜನವರಿ 26ರಂದು ಘೋಷಿಸಿಕೊಂಡಿತು. ಈ ದಿನವು ದೇಶದ ನಾಗರಿಕರಿಗೆ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವಿದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ದಿನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗೆಗೆ ಹಗಲಿರುಳೆನ್ನದೆ ಚಿಂತಿಸಿ ರಚಿಸಿದ “ಸಂವಿಧಾನ”ವು ಭವ್ಯಭಾರತಕ್ಕೆ ದಾರಿದೀಪವಾಗಿದೆ.

ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆದುಕೊಂಡ ಬಳಿಕ ಕೇವಲ 76 ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟçವಾಗಿ ಹೊರಹೊಮ್ಮಲು ಈ ಸಂವಿಧಾನವೇ ಬುನಾದಿಯಾಗಿದೆ.

ಸಾಮಾಜಿಕ ನ್ಯಾಯ, ಸರ್ವರಿಗೂ ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರö್ಯಗಳು ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೂಡ “ಸರ್ವರಿಗೂ ಸಮಪಾಲು-ಸಮಬಾಳು” ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ಜನರಿಗೆ ನೀಡಿದ ಭರವಸೆಯಂತೆ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಈ ಐದೂ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ “ನುಡಿದಂತೆ ನಡೆದಿದೆ” ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಜರುಗಿದ “ಕಾಂಗ್ರೆಸ್ ಅಧಿವೇಶನ” ದ ಶತಮಾನೋತ್ಸವವನ್ನು ಸರಕಾರವು ಬೆಳಗಾವಿಯಲ್ಲಿ ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಿತು. ಶತಮಾನೋತ್ಸವದ ಸವಿನೆನಪಿನಲ್ಲಿ ವರ್ಷವಿಡೀ ರಾಜ್ಯದಾದ್ಯಂತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿರುವ ಸರಕಾರವು ಇದಕ್ಕಾಗಿ 25 ಕೋಟಿ ರೂಪಾಯಿ ಅನುದಾನವನ್ನು ಪ್ರಕಟಿಸಿದೆ. 

ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಕೂಡ ಲೋಕಾರ್ಪಣೆಗೊಳಿಸಲಾಗಿದೆ. 1924 ರಲ್ಲಿ ಅಧಿವೇಶನ ಜರುಗಿದ ಟಿಳಕವಾಡಿಯ ವೀರಸೌಧ(ಕಾಂಗ್ರೆಸ್ ಬಾವಿ)ದ ಆವರಣದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣ; ನವೀಕೃತ ಫೊಟೋ ಗ್ಯಾಲರಿ ಲೋಕಾರ್ಪಣೆ; ಕಣಬರಗಿಯಲ್ಲಿ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಮತ್ತು ಫೊಟೋ ಗ್ಯಾಲರಿ ಉದ್ಘಾಟನೆ ನೆರವೇರಿಸಲಾಗಿದೆ. ಶತಮಾನೋತ್ಸವ ಅಂಗವಾಗಿ ಚಳಿಗಾಲ ಅಧಿವೇಶನ ಸಂಸರ್ಭದಲ್ಲಿ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮಾಗಾಂಧೀಜಿಯವರ ಜೀವನಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನ ಇದಲ್ಲದೇ ಅಲ್ಪಾವಧಿ- ದೀರ್ಘಾವಧಿಯ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. 

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್ ಮಾಹೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ 3.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಗಳ ಬಿತ್ತನೆಯಾಗಿರುತ್ತದೆ. ಬಿತ್ತನೆಗೆ ಬೇಕಾಗುವ ಉತ್ತಮ ಗುಣಮಟ್ಟದ 22637 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ 1.58 ಲಕ್ಷ ರೈತರಿಗೆ ಸಕಾಲದಲ್ಲಿ ಪೂರೈಸಲಾಗಿದೆ. ಹಿಂಗಾರು ಬೆಳೆಗಳ ಬೆಳವಣಿಗೆ ಉತ್ತಮವಾಗಿರುತ್ತದೆ.

ಜಿಲ್ಲೆಯ 15 ತಾಲೂಕಿನಲ್ಲಿ 28 ಲಕ್ಷ ಟನ್ ಮೇವಿನ ಲಭ್ಯತೆಯಿದ್ದು, ಅದು 45 ವಾರಗಳಿಗೆ ಸಾಕಾಗುತ್ತದೆ. 2024-25 ನೇ ಸಾಲಿನಲ್ಲಿ 6 ನೇ ಸುತ್ತಿನಲ್ಲಿ 12,35,123 ದೊಡ್ಡ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ದ ಲಸಿಕೆ ಹಾಕಿ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ಸರಕಾರಿ ಗೋಶಾಲೆ ಪ್ರಾರಂಭಿಸಲಾಗಿದ್ದು, ಪುಣ್ಯಕೋಟಿ ದತ್ತು ಯೊಜನೆಯಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಖಾಸಗಿ ಗೋಶಾಲೆಗಳಿಗೆ ರೂ.102 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.

“ಹಸಿವುಮುಕ್ತ ಕರ್ನಾಟಕ” ನಮ್ಮ ಸರಕಾರದ ಧ್ಯೇಯವಾಗಿದೆ. ಇದರಲ್ಲಿ ರಾಜ್ಯ ಸರಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿ “ಅನ್ನಭಾಗ್ಯ” ಯೋಜನೆಯನ್ನು ಜಾರಿಗೊಳಿಸಿದೆ.

ಜುಲೈ-2023 ರಿಂದ ಐದು ಕೆ.ಜಿ. ಅಕ್ಕಿಯ ಜತೆಗೆ ಇನ್ನುಳಿದ ಐದು ಕೆ.ಜಿ. ಅಕ್ಕಿ ಮೊತ್ತಕ್ಕೆ ಸಮನಾಗಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಲಾ 170 ರೂಪಾಯಿಗಳನ್ನು ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗಿರುತ್ತದೆ.

ಜುಲೈ 2023 ರಿಂದ ಸೆಪ್ಟೆಂಬರ್ 2024 ರವರೆಗೆ ಒಟ್ಟಾರೆ 846 ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿರುತ್ತದೆ.

ಗೃಹಲಕ್ಷ್ಮೀ ಯೋಜನೆಯಡಿ 11.87 ಲಕ್ಷ ಫಲಾನುಭವಿಗಳ ಗುರಿ ನಿಗದಿಪಡಿಸಿದ್ದು, ಇಲ್ಲಿಯವರೆಗೆ 11.56 ಲಕ್ಷ ಫಲಾನುಭವಿಗಳು ಈ ಯೋಜನೆಯಡಿ ನೋಂದಣಿಯಾಗಿರುತ್ತಾರೆ. ಅಗಸ್ಟ್- 2023 ರಿಂದ ಅಕ್ಟೋಬರ-2024 ರವರೆಗೆ ಅಂದರೆ 15 ತಿಂಗಳ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ. ಅಕ್ಟೋಬರ್-2024ರ ಮಾಹೆಗೆ 11.20 ಲಕ್ಷ ಫಲಾನುಭವಿಗಳಿಗೆ ರೂ.2000/- ದಂತೆ ಒಟ್ಟು ರೂ.224 ಕೋಟಿ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರಧಾನ ಕಛೇರಿಯಿಂದ ಜಮೆಯಾಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 10.36 ಲಕ್ಷ ಅರ್ಹ ಫಲಾನುಭವಿಗಳಿದ್ದು, ಸದರಿ ಯೋಜನೆಯಡಿಯಲ್ಲಿ ಒಟ್ಟು 10.07 ಸಂಖ್ಯೆಯ ಬಳಕೆದಾರರು ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ 200 ಯೂನಿಟ್‌ಗಳ ವರೆಗೆ ಉಚಿತವಾಗಿ ವಿದ್ಯುತ್‌ನ್ನು ನೀಡಲಾಗುತ್ತಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಆರ್ಥಿಕ ವರ್ಷ 2024-25 ರಲ್ಲಿ 790 ಸಂಖ್ಯೆಯ ಅರ್ಜಿಗಳು ಗಂಗಾ ಕಲ್ಯಾಣಯೋಜನೆ ಅಡಿಯಲ್ಲಿ ನೋಂದಣಿಯಾಗಿದ್ದು, ಈವರೆಗೆ 549 ಸಂಖ್ಯೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕಕಲ್ಪಿಸಲಾಗಿರುತ್ತದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 220 ಕೆ.ವಿ. ಸಾಮರ್ಥ್ಯದ 2 ಹಾಗೂ 110 ಕೆ.ವಿ. ಸಾಮರ್ಥ್ಯದ 12 ಉಪ-ಕೇಂದ್ರಗಳನ್ನು  ಮತ್ತು ಸಾಮಥ್ಯ ವರ್ಧಿಸುವ 23 ಪರಿವರ್ತಕಗಳ ಕಾಮಗಾರಿಗಳನ್ನು ಹಾಗೂ 7 ವಿದ್ಯುತ್ ಪ್ರಸರಣ ಮಾರ್ಗಗಳನ್ನು ಸುಮಾರು ರೂ.758 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ.

110 ಕೆ.ವಿ. ಸಾಮಥ್ಯಧ ಆರು ಉಪ-ಕೇಂದ್ರಗಳನ್ನು ಮತ್ತು ಸಾಮಥ್ಯ ವರ್ಧಿಸುವ 33 ಪರಿವರ್ತಕಗಳ ಕಾಮಗಾರಿಗಳನ್ನು ಹಾಗೂ 3 ಸಂಖ್ಯೆಯ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಮುಂಬರುವ ದಿನಗಳಲ್ಲಿ ಸುಮಾರು ರೂ. 277 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ.

ಯುವನಿಧಿ ಆರಂಭಗೊಂಡ 26-12-2023 ರಿಂದ 17-1-2025 ರವರೆಗೆ ಜಿಲ್ಲೆಯಲ್ಲಿ 35,919 ಪುರುಷರು ಹಾಗೂ 26,055 ಮಹಿಳೆಯರು ಸೇರಿದಂತೆ ಒಟ್ಟಾರೆ 61,974 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. 

ಶಕ್ತಿ ಯೋಜನೆ ಪೂರ್ವದಲ್ಲಿ ಪ್ರತಿದಿನ ಸರಾಸರಿ 5.40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭದ ನಂತರ ಪ್ರತಿದಿನ ಸರಾಸರಿ ಒಟ್ಟು 7.79 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಅದರಿಂದ ಒಟ್ಟು 2.39 ಲಕ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿದಿನ ಹೆಚ್ಚಳವಾಗಿರುತ್ತದೆ. 

ಶಕ್ತಿ ಯೋಜನೆ ಅಡಿಯಲ್ಲಿ 11 ಜೂನ್ 2023 ರಿಂದ 31 ಡಿಸೆಂಬರ್ 2024 ವರೆಗೆ (570 ದಿನಗಳು) ಒಟ್ಟು 44.42 ಕೋಟಿ ಪ್ರಯಾಣಿಕರಲ್ಲಿ 28.34 ಕೋಟಿ ಮಹಿಳಾ ಪ್ರಯಾಣಿಕರು (ಶೇಕಡಾ 63.8) ಪ್ರಯಾಣಿಸಿದ್ದು, ರೂ 666 ಕೋಟಿ ಮೊತ್ತದ ಶೂನ್ಯ ಟಿಕೆಟ್ ವಿತರಿಸಲಾಗಿದೆ. 

ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. 2023-24 ನೇ ಸಾಲಿನಲ್ಲಿ4 ಲಕ್ಷ 91 ಸಾವಿರ ರೈತರಿಗೆ ರೂ. 3,060 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ರೂ. 5/- ಪ್ರೋತ್ಸಾಹಧನ ನೀಡಲಾಗುತ್ತಿದೆ. 2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 33 ಸಾವಿರ ರೈತ ಸದಸ್ಯರಿಂದ 6 ಕೋಟಿ 22 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಒಟ್ಟು ರೂ. 31 ಕೋಟಿ 37 ಲಕ್ಷ ಪ್ರೋತ್ಸಾಹಧನವನ್ನು ರೈತರಿಗೆ ನೀಡಲಾಗುತ್ತಿದೆ.

ಲೋಕೋಪಯೋಗಿ ಇಲಾಖೆಯ ವತಿಯಿಂದ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗಳು-ಸುಧಾರಣೆ ಯೋಜನೆಯಡಿ ಬೆಳಗಾವಿ ವಿಭಾಗದಲ್ಲಿ ಪ್ರಸಕ್ತ 2024-25 ನೇ ಸಾಲಿಗೆ 20.78ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಒಟ್ಟು ರೂ. 56.65 ಕೋಟಿ 15 ಕಾಮಗಾರಿಗಳು ಅನುಮೋದನೆಯಾಗಿದ್ದು, ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಅದರಂತೆ ಚಿಕ್ಕೋಡಿ ವಿಭಾಗದಡಿ ಪ್ರಸಕ್ತ 2024-25 ನೇ ಸಾಲಿಗೆ 11.85 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಒಟ್ಟು ರೂ. 38.85 ಕೋಟಿ ವೆಚ್ಚದ 15 ಕಾಮಗಾರಿಗಳು ಅನುಮೋದನೆಯಾಗಿದ್ದು, ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಜಿಲ್ಲಾ ಮತ್ತು ಇತರೆ ರಸ್ತೆಗಳ ಸುಧಾರಣೆ ಶೀರ್ಷಿಕೆಯಡಿ 2024-25 ನೇ ಸಾಲಿಗೆ 70.493 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಒಟ್ಟು ರೂ. 63.85 ಕೋಟಿ ವೆಚ್ಚದಲ್ಲಿ 22 ಕಾಮಗಾರಿಗಳು ಅನುಮೋದನೆಯಾಗಿದ್ದು, ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 

ಚಿಕ್ಕೋಡಿ ವಿಭಾಗದಡಿ 104.87 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಒಟ್ಟು ರೂ. 112 ಕೋಟಿ ವೆಚ್ಚದಲ್ಲಿ 48 ಕಾಮಗಾರಿಗಳು ಅನುಮೋದನೆಯಾಗಿರುತ್ತವೆ.

ಇದಲ್ಲದೇ ರಾಜ್ಯಹೆದ್ದಾರಿ ರಸ್ತೆ ಮತ್ತು ಜಿಲ್ಲಾ ರಸ್ತೆಗಳ ನವೀಕರಣ; ರಾಜ್ಯ ಹೆದ್ದಾರಿ ಸೇತುವೆಗಳ ಸುಧಾರಣೆಗಳು; ಲೋಕೋಪಯೋಗಿ ಇಲಾಖೆಯ ಕಟ್ಟಡಗಳು; ನ್ಯಾಯಾಲಯ ಕಟ್ಟಡಗಳ ನಿರ್ಮಾಣ ನಿರ್ವಹಣೆ ಹಾಗೂ ರಾಜ್ಯಹೆದ್ದಾರಿ ನಿರ್ವಹಣೆಯ ಕೆಲಸಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ.

ನೀರಾವರಿ (ಉತ್ತರ) ವಲಯ ವ್ಯಾಪ್ತಿಯಡಿಯಲ್ಲಿ ಪ್ರಮುಖವಾಗಿ ಘಟಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ, ಕಿಣಿಯೆ ಯೋಜನೆ, ಧೂದಗಂಗಾ ಹಾಗೂ ಹಿಪ್ಪರಗಿ ಯೋಜನೆಗಳು (ಒಟ್ಟು 6 ಹರಿ ನೀರು ಯೋಜನೆಗಳು) ಪ್ರಮುಖವಾಗಿರುತ್ತವೆ. ಇವುಗಳ ಪೈಕಿ ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿಪ್ಪರಗಿ ಯೋಜನೆಗಳು ಪೂರ್ಣಗೊಂಡಿರುತ್ತವೆ. ಕಿಣಿಯೆ ಹಾಗೂ ದೂಧಗಂಗಾ ಯೋಜನೆಗಳು ಪ್ರಗತಿಯಲ್ಲಿವೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ಶ್ರೀ ರಾಮೇಶ್ವರ, ಅಡವಿಸಿದ್ದೇಶ್ವರ, ಶಂಕರಲಿಂಗ, ಮಹಾಲಕ್ಷ್ಮೀ, ಮಾರ್ಕಂಡೇಯ, ಅಮ್ಮಾಜೇಶ್ವರಿ ಹೀಗೆ ಒಟ್ಟು 12 ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ.  ಈ 12 ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ 6 ತಾಲೂಕುಗಳ 70,785 ಹೆ., ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ 13,869 ಹೆ. ಹಾಗೂ ಬಿಜಾಪೂರ ಜಿಲ್ಲೆಯ 44,375 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.ಈ ಏತ ನೀರಾವರಿ ಯೋಜನೆಗಳಿಗೆ ಈವರೆಗೆ ಆಗಿರುವ ವೆಚ್ಚವು ರೂ. 4,646 ಕೋಟಿಗಳಾಗಿರುತ್ತವೆ. 

ಬೆಳಗಾವಿ ಜಿಲ್ಲೆಯ 37 ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯ ಶೇ.85ರಷ್ಟು ರೂ.267 ಕೋಟಿ ಮೊತ್ತದ 1047 ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆಯಾಗಿರುತ್ತದೆ.

31 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 33 ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿದ್ದು, ಅದರಂತೆ ಈವರೆಗೆ 24 ಕ್ಯಾಂಟೀನ್ ಗಳ ರಚನೆ ಪೂರ್ಣಗೊಂಡಿದ್ದು,  1 ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ 10 ಕ್ಯಾಂಟೀನ್ ಗಳು ಕಾರ್ಯಾಚರಣೆಯಲ್ಲಿರುತ್ತವೆ.

ಬೆಳಗಾವಿ ಮಹಾನಗರ ಪಾಲಿಕೆಯು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಉದ್ದೇಶಿಸಿದ್ದು, ವಿಶ್ವಬ್ಯಾಂಕಿನ ಧನಸಹಾಯದ ನೆರವಿನೊಂದಿಗೆ ಬೆಳಗಾವಿ ನಗರದಲ್ಲಿ 24/7 ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಸದರಿ ಯೋಜನೆಯಡಿಯಲ್ಲಿ ನೀರಿನ ಸಂಪರ್ಕ ನೀಡುವ ಕಾಮಗಾರಿಯು ಕೂಡ ಪ್ರಗತಿಯಲ್ಲಿದ್ದು, ಜೂನ್-2026 ರೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗುರಿಯನ್ನು ಹೊಂದಲಾಗಿದೆ. ಅಮೃತ ಯೋಜನೆ ಅಡಿಯಲ್ಲಿ ಬೆಳಗಾವಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆ ರೂ. 157.56 ಕೋಟಿಗಳಿಗೆ ತಾಂತ್ರಿಕ ಅನುಮೋದನೆ ದೊರೆತಿರುತ್ತದೆ. 

ಬೆಳಗಾವಿ ಮಹಾನಗರ ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ (ಹಂತ-02) ಯಡಿಯಲ್ಲಿ ರೂ.127.50 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಸದರಿ ಅನುದಾನದ ಕ್ರಿಯಾ ಯೋಜನೆ ತಯಾರಿಕೆ ಪ್ರಗತಿ ಹಂತದಲ್ಲಿದೆ.‘ಸ್ಮಾರ್ಟಸಿಟಿ ಯೋಜನೆ’ಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 50:50 ಅನುಪಾತದಲ್ಲಿ ಒಟ್ಟು ರೂ.1000 ಕೋಟಿ ಅನುದಾನ ಒದಗಿಸಲಾಗುತ್ತಿದೆ. 

ಈ ವರೆಗೆ ಬಿಡುಗಡೆಯಾದ ರೂ.930 ಕೋಟಿ ಅನುದಾನದಲ್ಲಿ  ರೂ. 870.48 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು 107 ಕಾಮಗಾರಿಗಳಲ್ಲಿ 97 ಕಾಮಗಾರಿಗಳು ಪೂರ್ಣಗೊಂಡಿದ್ದು, 10 ಕಾಮಗಾರಿಗಳು ಪ್ರಗತಿಯಲ್ಲಿವೆ. ಪೂರ್ಣಗೊಂಡ 97 ಕಾಮಗಾರಿಗಳಲ್ಲಿ 74 ಕಾಮಗಾರಿಗಳನ್ನು ಈಗಾಗಲೇ ಸಂಬಂಧಿತ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ.

ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ‘ಸರ್ವಜನಾಂಗದ ಶಾಂತಿಯ ತೋಟ’ವೆಂದು ವ್ಯಾಖ್ಯಾನಿಸಿದ್ದಾರೆ. ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕೋಣ. ಇದು ನನ್ನ ಗಣರಾಜ್ಯೋತ್ಸವದ ಸಂದೇಶವಾಗಿದೆ. ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button