*ವಿಜಯೇಂದ್ರ ವಿರುದ್ಧ ಬಿಜೆಪಿ ರೆಬಲ್ಸ್ ಸಮರ: ದೆಹಲಿಗೆ ತೆರಳಲು ಯತ್ನಾಳ ಟೀಮ್ ರೇಡಿ*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಬಿಜೆಪಿ ನಾಯಕರ ನಡುವೆ ತಿಕ್ಕಾಟ ಜೋರಾಗಿ, ಬಣ ಬಡಿದಾಟ ಕೂಡ ಅಂತಿಮ ಹಂತ ತಲುಪಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಇಂದು ದೆಹಲಿಗೆ ತೆರಳಲಿದ್ದು, ವರಿಷ್ಠರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಯತ್ನಾಳ್ ಜೊತೆಗೆ ಮತ್ತಷ್ಟು ರೆಬೆಲ್ ನಾಯಕರು ಕೂಡ ಸಾಥ್ ನೀಡಿದ್ದಾರೆ.
ಯತ್ನಾಳ್ ಜೊತೆಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹಾಗೂ ಬಿ.ಪಿ. ಹರೀಶ್, ಜಿ.ಎಂ. ಸಿದ್ದೇಶ್ವರ ಇತರರು ದೆಹಲಿಗೆ ಹೋಗಲಿದ್ದಾರೆ. ದೆಹಲಿಯಲ್ಲಿ 3-4 ದಿನಗಳ ಕಾಲ ಇದ್ದು ವರಿಷ್ಠರ ಭೇಟಿಗೆ ಅವಕಾಶ ಸಿಕ್ಕ ತಕ್ಷಣ ಚರ್ಚೆಯನ್ನು ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದೊಳಗಿನ ಕಾದಾಟ ಹೆಚ್ಚಾಗಿದ್ದು, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಮತ್ತು ಇತರರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಪೂರ್ವಭಾವಿ ಸಭೆ ಕೂಡ ನಡೆಸಿದ್ದಾರೆ.
ಬಿ.ವೈ. ವಿಜಯೇಂದ್ರ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ವಿಚಾರದ ಬಗ್ಗೆ ಪ್ರಮುಖವಾಗಿ ದೆಹಲಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಹಾಗೇ ಜೆ.ಪಿ. ನಡ್ಡಾ ಅವರ ಭೇಟಿಗೆ ಸಮಯ ಕೇಳಲಾಗಿದ್ದು, ಇನ್ನೂ ಸಮಯ ಸಿಕ್ಕಿಲ್ಲ. ಹೀಗಾಗಿ ಅಲ್ಲೇ ಉಳಿದುಕೊಂಡು ಭೇಟಿ ಮಾಡಿಯೇ ಬರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ