ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೋರಾಟಗಳ ಸಂದರ್ಭಗಳಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿಯು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದೆ. ಮಾಹಿತಿ ಪಡೆದ ನಂತರ ಉಪ ಸಮಿತಿಯು ವರದಿ ಸಲ್ಲಿಸಿದ ತಕ್ಷಣ ಸರಕಾರ ಸಕರಾತ್ಮಕ ಕ್ರಮ ಜರುಗಿಸಲಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಹಿರೇಬಾಗೆವಾಡಿಯಲ್ಲಿ ಪೊಲೀಸ್ ವಸತಿ ಸಮುಚ್ಛಯಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದಾಗ, ಭಾರತೀಯ ಕೃಷಿಕ ಸಮಾಜ(ಸಂ)ದ ವತಿಯಿಂದ ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು, ಈ ಕುರಿತು ಸಲ್ಲಿಸಿದ ಮನವಿಗೆ ಸ್ಫಂಧಿಸಿದ ಸಚಿವರು, ಆದಷ್ಟು ಬೇಗ ಈ ಪ್ರಕ್ರಿಯೆಯ ಪೂರ್ಣಗೊಳಿಸಲಾಗುವುದು ಎಂದರು.
ಕಳಸಾ-ಬಂಡೂರಿ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸರಕಾರ ಬದ್ದವಾಗಿದೆ. ಈ ಯೋಜನೆಯ ಕಾಮಗಾರಿಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಸಮ್ಮತಿ ನೀಡಿದೆ. ಕಾಮಗಾರಿ ಆರಂಭಕ್ಕೆ ಸರಕಾರ ತಕ್ಷಣ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯ ಬೇಡಿಕೆಗೆ ಸರಕಾರ ಸ್ಪಂಧಿಸಲಿದೆ. ಶೇಷಗಿರಿ ಆಣೆಕಟ್ಟಿನ ಬಗ್ಗೆಯೂ ಸರಕಾರ ಗಮನ ಹರಿಸಲಿದೆ ಎಂದರು.
ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಕಳಸಾ-ಬಂಡೂರಿ ಕಾಮಗಾರಿಗಳನ್ನು ಬೇಗ ಆರಂಭಿಸಬೇಕು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ ಸ್ಥಾಪನೆ ಮಾಡಬೇಕು ಹಾಗೂ ಶೇಷಗಿರಿ ಆಣೆಕಟ್ಟಿನ ಕಾಮಗಾರಿ ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ದುಂಡಯ್ಯ ಪೂಜಾರ, ಯುವ ಜಿಲ್ಲಾಧ್ಯಕ್ಷ ಸುನೀಲ ಹಂಪಣ್ಣವರ, ಖಾನಾಪುರ ಅಧ್ಯಕ್ಷ ಶ್ರೀಧರ ಬಾಫನಾ, ಈರಪ್ಪ ಲಕಮೋಜಿ, ಆರ್.ಎಸ್.ದರ್ಗೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ