Kannada NewsKarnataka NewsLatest

ಜೈನ ಸಮಾಜ ಒಗ್ಗಟ್ಟಿನಿಂದ ಮುನ್ನಡೆಯಬೇಕು – ರಾವಸಾಹೇಬ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- : ಜೈನ ಸಮಾಜ ಅಲ್ಪ ಸಂಖ್ಯಾತ ಸಮಾಜವಾಗಿದ್ದು, ಸಮಾಜ ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ ಎಂದು ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಹೇಳಿದರು.
ಬೆಳಗಾವಿಯ ಧರ್ಮನಾಥ ಭವನದಲ್ಲಿ ರವಿವಾರ ಕರ್ನಾಟಕ ರಾಜ್ಯ ಜೈನ ನೌಕರರ ಒಕ್ಕೂಟದ ಪ್ರಥಮ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮಾಜ ಅಲ್ಪ ಸಂಖ್ಯಾತರಲ್ಲಿ ಅಲ್ಪವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜೈನ ಸಮಾಜ ಹಂಚಿ ಹೋಗಿದೆ. ಇದರಿಂದ ಸಮಾಜಕ್ಕೆ ಹಿನ್ನಡೆಯಾಗುತ್ತಿದ್ದು, ಸಮಾಜದ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಅವರು ತಿಳಿಸಿದರು.
ಸಮಾಜದಲ್ಲಿನ ಪ್ರತಿನಿತ್ಯ ಆಗು ಹೋಗುಗಳ ಬಗ್ಗೆ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟನಲ್ಲಿ ಸಂಘ ಸಂಸ್ಥೆಗಳು, ಒಕ್ಕೂಟಗಳು ಒಗ್ಗೂಡಿನಿಂದ ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಅವರು ಮಾತನಾಡಿ, ಜೈನ ಸಮಾಜದ ಇತಿಹಾಸದ ಬಗ್ಗೆ ಮತ್ತು ಜೈನ ಧರ್ಮದ ಪ್ರಾಚೀನತೆ ಕುರಿತಾದ ಸಂಶೋಧನೆಗಳು ನಡೆಯಬೇಕಾಗಿದೆ. ನಮ್ಮ ಧರ್ಮದಲ್ಲಿ ಸಧ್ಯಕ್ಕೆ ಲಭ್ಯವಿರುವ ತಾಳೆಪತ್ರಗಳ ಸಂರಕ್ಷಣೆ ಮತ್ತು ಅವುಗಳ ಅಧ್ಯಯನ ಹಾಗೂ ಕಂಪ್ಯೂಟಿಕರಣಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸಂಶೋಧಕರು ಮತ್ತು ಶಿಕ್ಷಕರು ಸಮಾಜದ ಹಿತಕ್ಕಾಗಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸಮಾಜದಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳಬೇಕೆಂದು ಅವರು ಹೇಳಿದರು.
ಇನ್ನೊರ್ವ ಅತಿಥಿ ಭರತೇಶ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ, ಜೈನ ಸಮಾಜದಲ್ಲಿ ಸುಶಿಕ್ಷಿತರು ಹೆಚ್ಚಾಗಿದ್ದರೂ ಸಹ ಸಮಾಜ ಬೆಳೆಯುತ್ತಿಲ್ಲ. ಒಂದು ಕಡೆ ಭಾರತದ ಜನಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದರೆ ಜೈನ ಸಮಾಜದ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು, ಈ ನಿಟ್ಟಿನಲ್ಲಿ ಸಮಾಜದ ಸುಶಿಕ್ಷಿತ ವರ್ಗ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಫ್‌ಎಸ್ ಅಧಿಕಾರಿ ವಿಜಯಕುಮಾರ ಗೋಗಿ ಅವರು ಮಾತನಾಡಿ, ಇಂದು ಎಲ್ಲ ಸಮಾಜಗಳಲ್ಲಿ ಪರಿವರ್ತನೆಯಾಗುತ್ತಿದೆ. ಜೈನ ಸಮಾಜವೂ ಪರಿವರ್ತನೆಯಾಗಬೇಕಾಗಿದೆ. ಜೈನ ಸಮಾಜದಲ್ಲಿನ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಆಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಅವರು ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಜೈನ ಸಮಾಜದಲ್ಲಿ ಅನೇಕ ವಿದ್ಯಾವಂತರಿದ್ದಾರೆ. ಶಿಕ್ಷಕರು, ಅಭಿಯಂತರರು, ರಾಜಕೀಯ ವ್ಯಕ್ತಿಗಳು, ಸರಕಾರಿ ನೌಕರರು ಸೇರಿದಂತೆ ಎಲ್ಲರೂ ತಮ್ಮ ಕೈಲಾದ ಸಮಾಜ ಸೇವೆಯನ್ನು ಮಾಡಬೇಕು. ಆಗ ಮಾತ್ರ ಸಮಾಜ ಅಭಿವೃದ್ದಿಯತ್ತ ದಾಪುಗಾಲು ಹಾಕಲು ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಪೋಲಿಸ್ ವರಿಷ್ಠಾಧಿಕಾರಿ ಎಸಿಬಿ ಬೆಂಗಳೂರು ಐಪಿಎಸ್ ಅಧಿಕಾರಿ ಜೀನೇಂದ್ರ ಖನಗಾಂವಿ ಅವರು ಮಾತನಾಡಿ, ಜೈನ ಸಮಾಜದಲ್ಲಿ ಪದವಿ ಪಡೆದ ಲಕ್ಷಾಂತರ ಯುವಕರಿದ್ದಾರೆ. ಆದರೆ ಉನ್ನತ ಶಿಕ್ಷಣ ಐಎಎಸ್, ಐಪಿಎಸ್ ತರಬೇತಿ ಪಡೆಯಲು ಮುಂದೆ ಬರುತ್ತಿಲ್ಲ. ಬಹುಷಃ ಇಂಗ್ಲೀಷ್ ಭಾಷಾ ಜ್ಞಾನದ ಕೊರತೆ ಎಂಬ ಭಾವನೆ ಯುವಕರಲ್ಲಿ ಮೂಡಿರಬಹುದು. ಈ ಕೊರತೆಯ ಭಯವನ್ನು ತೊರೆದು ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆಯಬಹುದು. ಇದಕ್ಕಾಗಿ ಎಲ್ಲ ಸಹಾಯ ಸಹಕಾರವನ್ನು ನೀಡುತ್ತೇನೆಂದು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ನಿವೃತ್ತ ನಿರ್ದೇಶಕರು ಹಾಗೂ ಜಿನದರ್ಶನ ಕಾರ್ಯಕ್ರಮದ ನಿರ್ಮಾಪಕರಾದ ಬಿ.ಪ್ರಸನ್ನಯ್ಯ ಅವರು ಮಾತನಾಡಿ, ಇಂದು ಕರ್ನಾಟಕ ರಾಜ್ಯ ಜೈನ ನೌಕರರ ಒಕ್ಕೂಟ ಸ್ಥಾಪನೆಯಾಗಿರುವುದು ಸಮಾಜಕ್ಕೆ ಹರ್ಷ ತಂದಿದೆ. ಈ ಸಂಘಟನೆಯ ಮೂಲಕ ಜೈನ ಸಮಾಜ ಅಭಿವೃದ್ದಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ , ಎಕ್ಸಲಂಟ್ ವಿದ್ಯಾ ಸಂಸ್ಥೆ ಮೂಡಬಿದರೆಯು ಅಧ್ಯಕ್ಷ ಯುವರಾಜ ಜೈನ ಅವರು ಮಾತನಾಡಿದರು. ವೇದಿಕೆ ಮೇಲೆ ಅಖಿಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆಯ ಅಧ್ಯಕ್ಷ ಸಾತಪ್ಪ ಗೊಂಗಡಿ ಉಪಸ್ಥಿತರಿದ್ದರು. ರಾಜ್ಯ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಅರುಣ ಯಲಗುದ್ರಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ.ಅಜೀತ ಮುರುಗುಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಾ ಶಿರಗುಪ್ಪಿ ಕಾರ್ಯಕ್ರಮ ನಿರೂಪಿಸಿದರು. ಲಲಿತಾ ಕ್ಯಾಸಣ್ಣವರ ವಂದಿಸಿದರು.
ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ನವರತ್ನ ಇಂದುಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಅಜೀತ ಮುರುಗುಂಡೆ ಅವರ ಮೂರು ಪುಸ್ತಕಗಳನ್ನು , ಹಳ್ಳಿಯ ಸಂದೇಶ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನಿಯರನ್ನು ಸನ್ಮಾನಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button