![](https://pragativahini.com/wp-content/uploads/2025/02/IMG_20250205_202036_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2023-24ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಜಿಲ್ಲಾ ಪುರಸ್ಕಾರ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಬೆಳಗಾವಿ ಜಿಲ್ಲೆಗೆ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನರೇಗಾ ಹಬ್ಬ-2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಂಕಾ ಖರ್ಗೆ ಅವರು ಜಿಪಂ ಸಿಇಒ ರಾಹುಲ್ ಶಿಂಧೆ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪ, ಎಡಿಪಿಸಿ ಬಸವರಾಜು, ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ್ ಅವರಿಗೆ ಅಮೃತ ಸರೋವರ ಜಿಲ್ಲಾ ಪುರಸ್ಕಾರ ನೀಡಿ ಗೌರವಿಸಿದರು.
ಅದೇ ರೀತಿ ಬೆಳಗಾವಿ ಜಿಲ್ಲೆಯ ಕೃಷಿ ಮತ್ತು ಜಲಾನಯನ ಹಾಗೂ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾ ಒಗ್ಗೂಡಿಸುವಿಕೆ ಪುರಸ್ಕಾರವನ್ನು ಜಿಪಂ ಸಿಇಒ ರಾಹುಲ್ ಶಿಂಧೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಅವರು ಸ್ವೀಕರಿಸಿದರು.
ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮ ಪಂಚಾಯತಿಗೆ ಅತ್ಯುತ್ತಮ ಗ್ರಾಮ ಪಂಚಾಯತಿ ಪುರಸ್ಕಾರವನ್ನು ತಾಪಂ ಇಒ ಟಿ.ಆರ್.ಮಲ್ನಾಡದ, ಸಹಾಯಕ ನಿರ್ದೇಶಕ (ಗ್ರಾಉ) ಲಕ್ಷ್ಮೀನಾರಾಯಣ, ಗ್ರಾಪಂ ಅಧ್ಯಕ್ಷ ಬಸವರಾಜ ಗೊಸುರಿ ಹಾಗೂ ಪಿಡಿಒ ನಿರಂಜನ ಕುರಬೆಟ್ಟ ಅವರು ಸ್ವೀಕರಿಸಿದರು. ಬಳಿಕ ಉತ್ತಮ ಕಾಯಕ ಬಂಧು ಪುರಸ್ಕಾರವನ್ನು ಕಾಯಕ ಬಂಧು ಅನಿತಾ ತುಕಾರಾಮ ಬೆಳಗಾಂವಕರ್, ತಾಪಂ ಇಒ ರಮೇಶ ಹೆಡಗೆ, ತಾಲೂಕು ಐಇಸಿ ಸಂಯೋಜಕ ರಮೇಶ ಮಾದರ ಸ್ವೀಕರಿಸಿದರು. ನರೇಗಾ ಹಬ್ಬ-2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆ ಈ ಐದು ಪ್ರಶಸ್ತಿ ಪಡೆದು ಸಾಧನೆ ಮಾಡಿದೆ.
ಈ ಸಂದರ್ಭದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಶರತ್ ಬಚ್ವೇಗೌಡ, ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನಕುಮಾರ ಮಾಲಪಾಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ