![](https://pragativahini.com/wp-content/uploads/2025/02/reddy-.jpg)
ಪ್ರಗತಿವಾಹಿನಿ ಸುದ್ದಿ: ರೋಬೋಟ್ ನೆರವಿನಿಂದ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ನನ್ನ ಶೀಘ್ರಚೇತರಿಕೆಗೆ ಹೆಚ್ಚು ಸಹಕಾರಿಯಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಒಳಪಟ್ಟು, ಚೇತರಿಸಿಕೊಂಡವರ ಬೆಂಬಲಕ್ಕಾಗಿ ಆಯೋಜಿಸಿದ್ದ “ಸ್ಟ್ರೈಡ್ ಸಪೋರ್ಟ್ ಗ್ರೂಪ್” ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಲವು ಸಮಯದಿಂದ ಮೊಣಕಾಲಿನ ನೋವು ಕಾಡಲಾರಂಭಿಸಿತು, ಮೆಟ್ಟಿಲುಸಹ ಹತ್ತಲು ಸಾಧ್ಯವಾಗುತ್ತಿರಲಿಲ್ಲ, ಹಲವಾರು ಜನ ಹಲವು ರೀತಿಯ ಸಲಹೆ ನೀಡಿದರು, ಮಂಡಿನೋವಿಗೆ ತೈಲವನ್ನೂ ಸಹ ಹಚ್ಚಿಬಿಟ್ಟೆ, ಆದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ನಂತರ ಸ್ನೇಹಿತರ ಸಲಹೆಯಂತೆ ಫೋರ್ಟಿಸ್ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಡಾ.ನಾರಾಯಣ್ ಹುಲ್ಸೆ ಅವರನ್ನು ಭೇಟಿ ಮಾಡಿ, ತಪಾಸಣೆಗೆ ಒಳಗಾದಾಗ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಿದರು. ಪ್ರಾರಂಭದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಹಿಂಜರಿಕೆ ಇತ್ತು, ಆದರೆ, ರೋಬೋಟ್ ನೆರವಿನಿಂದ ನಿಖರವಾಗಿ ಹಾಗೂ ಅತಿವೇಗವಾಗಿ ಚೇತರಿಕೆ ಕಾಣಬಹುದು ಎಂಬುದರ ಬಗ್ಗೆ ವೈದ್ಯರ ಭರವಸೆ ನೀಡಿದ ಬಳಿಕ ತೆರೆದ ಶಸ್ತ್ರಚಿಕಿತ್ಸೆ ಬದಲು ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಆಯ್ದುಕೊಂಡೆ. ಅಂತೆಯೇ ಶಸ್ತ್ರಚಿಕಿತ್ಸೆ ಬಳಿಕ ನನ್ನ ನಿರೀಕ್ಷೆಗೂ ಮೀರಿ ಶೀಘ್ರವಾಗಿ ಚೇತರಿಕೆ ಕಂಡಿದ್ದೇನೆ. ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ರೋಬೋಟ್ ನೆರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂಬುದು ನನ್ನ ಅನಿಸಿಕೆ. ಇಲ್ಲಿನ ವೈದ್ಯ ತಂಡವು ಸಹ ಸೂಕ್ತ ಮಾಹಿತಿಯೊಂದಿಗೆ, ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ಉತ್ತಮ ರೀತಿಯಲ್ಲಿ ನನ್ನ ಕ್ಷೇಮಸಮಾಚಾರ ನೋಡಿಕೊಂಡರು ಎಂದು ಹೇಳಿದರು.
ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಪ್ರತಿಯೊಬ್ಬರು ಸ್ಟ್ರೈಡ್ ಸಪೋರ್ಟ್ ಗ್ರೂಪ್ ಕಾರ್ಯಕ್ರಮದ ಅಡಿ ಭಾಗಿಯಾಗಿರುವುದು ಸಾಕಷ್ಟು ಜನರಿಗೆ ಸ್ಪೂರ್ತಿದಾಯಕವಾಗಿದೆ. ಹಲವರು ಮೊಣಕಾಲು ನೋವಿನಿಂದ ಬಳಲುತ್ತಿದ್ದರೂ, ಶಸ್ತ್ರಚಿಕಿತ್ಸೆಯ ಬೀತಿಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ನೋವಿನಲ್ಲೇ ನರಳುತ್ತಿರುತ್ತಾರೆ, ನಮ್ಮಂತಹ ನೂರಾರು ಜನರ ಅನುಭವವು ಬೇರೆಯವರಿಗೆ ಸ್ಪೂರ್ತಿಯಾಗಲಿ ಎಂದರು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಡಾ.ವಿ.ವಿ. ಚಿನಿವಾಲರ್ ಮಾತನಾಡಿ, ನಾನೂ ಸಹ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು, ಚೇತರಿಕೆ ಕಂಡಿದ್ದೇನೆ, ವೈದ್ಯಕೀಯ ಲೋಕದಲ್ಲಿ ರೋಬೋಟ್ನ ಆಗಮನ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಫೋರ್ಟಿಸ್ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಡಾ.ನಾರಾಯಣ್ ಹುಲ್ಸೆ ಮಾತನಾಡಿ, ಇಂದು ರೋಬೋಟ್ ನೆರವು ವೈದ್ಯಲೋಕದಲ್ಲಿ ಹೊಸ ಅದ್ಯಾಯ ಸೃಷ್ಟಿಸಿದೆ. ಅದರಲ್ಲೂ ಮೊಣಕಾಲು, ಸೊಂಟ ಇತರೆ ಕೀಲು ಬದಲಾವಣೆಗೆ ರೋಬೋಟ್ ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆಗೆ ಸಹಕಾರಿಯಾಗಿದೆ. ಹೀಗಾಗಿಯೇ ಫೋರ್ಟಿಸ್ ಆಸ್ಪತ್ರೆಯಲ್ಲಿ ಸ್ಟ್ರೈಡ್ ಸಪೋರ್ಟ್ ಗ್ರೂಪ್ ಕಾರ್ಯಕ್ರಮ ಚಾಲನೆ ನೀಡಿದ್ದೇನೆ. ಫೋರ್ಟಿಸ್ ಸ್ಟ್ರೈಡ್ ಎನ್ನುವುದು ಕೀಲು ಆರೋಗ್ಯ ಸವಾಲುಗಳಿಂದ ಪ್ರಭಾವಿತ ವ್ಯಕ್ತಿಗಳನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಬೆಂಬಲ ಗುಂಪಾಗಿದೆ. ಇದು ಅನುಭವಗಳನ್ನು ಹಂಚಿಕೊಳ್ಳಲು, ತಜ್ಞರ ಒಳನೋಟಗಳನ್ನು ಪಡೆಯಲು ಮತ್ತು ಸುಧಾರಿತ ಚೇತರಿಕೆಗಾಗಿ ಅಮೂಲ್ಯವಾದ ಮಾರ್ಗದರ್ಶನವನ್ನು ಪಡೆಯುವ ವೇದಿಕೆಯಾಗಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ