ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ಹುಬ್ಬಳ್ಳಿಯಲ್ಲಿ ಅ.27ರಂದು ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ಭಾಷಣದ ವೀಡಿಯೋ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಗದ್ದಲ ಉಂಟು ಮಾಡುತ್ತಿದೆ.
ಕಾಂಗ್ರೆಸ್ ವೀಡಿಯೋವನ್ನು ಅಸ್ತ್ರವಾಗಿ ಮಾಡಿಕೊಂಡರೆ, ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಇದೇ ವೇಳೆ ಅನರ್ಹ ಶಾಸಕರು ಕಂಗಾಲಾಗಿದ್ದಾರೆ.
ಬಿಜೆಪಿ ಪ್ರಮುಖರ ಸಭೆಯಲ್ಲಿ ಯಡಿಯೂರಪ್ಪ ಅನರ್ಹ ಶಾಸಕರ ಪರ ಬ್ಯಾಟಿಂಗ್ ಮಾಡಲು ಹೋಗಿ ಸ್ವ ಪಕ್ಷೀಯರ ವಿರುದ್ಧ ತೀವ್ರ ಕಿಡಿ ಕಾರಿದ್ದರು. ಅಲ್ಲದೆ ಅನರ್ಹ ಶಾಸಕರ ವಿಷಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನೂ ಉಲ್ಲೇಖಿಸಿದ್ದರು.
ಇದರ ವೀಡಿಯೋ 4 ದಿನದ ನಂತರ ಬಹಿರಂಗವಾಗಿ ವೈರಲ್ ಆಗಿದೆ. ಹಿಂದಿನ ಸಾಲಿನಲ್ಲಿ ಕುಳಿತವರ್ಯಾರೋ ವೀಡಿಯೋ ಮಾಡಿದ್ದಾರೆ. ಆದರೆ ಯಾರಿಗೂ ಗೊತ್ತಾಗದಂತೆ ಮಾಡಲು ಹೋಗಿ ಅದು ಆಡಿಯೋದಂತೆ ಭಾಸವಾಗುತ್ತಿದೆ. ಕೊನೆಯಲ್ಲಿ ಒಮ್ಮೆ ಸಭೆಯಲ್ಲಿದ್ದವರು ಹಾಗೂ ಯಡಿಯೂರಪ್ಪ ಕಾಣುತ್ತಾರೆ.
ಭಾಷಣದಲ್ಲಿ ಯಡಿಯೂರಪ್ಪ ಎಲ್ಲರ ಮೇಲೆ ಕಿಡಿಕಾರಿದ್ದಾರೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಲ್ಳಬೇಕಾಗಿದ್ದ ನಮ್ಮನ್ನು ಆಡಲಿತ ಸ್ಥಾನದಲ್ಲಿ ಕೂಡ್ರಿಸಿದ ಅನರ್ಹ ಶಾಸಕರ ಪರವಾಗಿ ನಾವು ನಿಲ್ಲಬೇಕಾಗಿದೆ. ಆದರೆ ನೀವೆಲ್ಲ ಅವರ ವಿರುದ್ಧ ಮಾತನಾಡುತ್ತಿದ್ದೀರಿ. ನನಗೆ ಮುಖ್ಯಮಂತ್ರಿ ಆಗಬೇಕಿರಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಅನರ್ಹ ಶಾಸಕರನ್ನು ಕರೆತರುವಲ್ಲಿ ಮಾಡಿದ ಪ್ರಯತ್ನ, ಮುಂಬೈಯಲ್ಲಿ ಅವರನ್ನೆಲ್ಲಿ ಎರಡೂವರೆ ತಿಂಗಳಿ ಇಟ್ಟಿದ್ದು ನಿಮಗೆಲ್ಲ ಗೊತ್ತಿದೆ ತಾನೆ ಎಂದೂ ಪ್ರಶ್ನಿಸಿದ್ದಾರೆ.
ಸುಮಾರು 7.4 ನಿಮಿಷದ ಭಾಷಣದಲ್ಲಿ ಯಡಿಯೂರಪ್ಪ ಮಾಡಿದ ಭಾಷಣ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಅದನ್ನು ಅಸ್ತ್ರವಾಗಿಸಿಕೊಂಡಿದೆ. ಈಗಾಗಲೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಸುಪ್ರಿಂ ಕೋರ್ಟ್ ಗೂ ಅದರ ಪ್ರತಿ ಸಲ್ಲಿಸಿದೆ. ಯಡಿಯೂರಪ್ಪ ಅವರನ್ನು ವಜಾ ಮಾಡಬೇಕು, ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.
ಈ ವೀಡಿಯೋ ಬಿಜೆಪಿಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಹೋದಲ್ಲೆಲ್ಲ ಪ್ರಸ್ತಾಪವಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷರು ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಅವರಿಂದ ವಿವರ ಕೇಳಿದ್ದಾರೆ. ಅಲ್ಲದೆ ವೀಡಿಯೋ ಬಹಿರಂಗ ಮಾಡಿದವರನ್ನು ಪತ್ತೆ ಹಚ್ಚಲು ಆಂತರಿಕ ತನಿಖೆಯನ್ನೂ ನಡೆಸಲಾಗುತ್ತಿದೆ.
ವೀಡಿಯೋ ಸಂಬಂಧ ಯಡಿಯೂರಪ್ಪ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಮೊದಲು ತಮ್ಮದೇ ಧ್ವನಿ ಅದು ಎಂದು ಹೇಳಿದ್ದ ಯಡಿಯೂರಪ್ಪ, ನಂತರ ಅದನ್ನು ಅಲ್ಲಗಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನಗತ್ಯವಾಗಿ ಸುಪ್ರಿಂ ಕೋರ್ಟ್ ಗೆ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎದು ಯಡಿಯೂರಪ್ಪ ಹೇಳಿದ್ದಾರೆ.
ಸಂಸದೆ ಶೋಭಾ ಕರಂದ್ಲಾಚೆ ಇದೆಲ್ಲ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕುತಂತ್ರ ಎನ್ನುತ್ತಿದ್ದಾರೆ. ಇದೇ ವೇಳೆ ಸಚಿವ ಬಸವರಾಜ ಬೊಮ್ಮಾಯಿ, ಆರ್.ಅಶೋಕ ಸೇರಿದಂತೆ ಜೆಪಿಯ ಕೆಲವು ನಾಯಕರು ವೀಡಿಯೋ ನಕಲಿ ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ಪತ್ರಿಕಾಗೋಷ್ಠಿ ನಡೆಸಿ, ವೀಡಿಯೋ ಬಹಿರಂಗ ಮಾಡಿದವರ ಕುರಿತು ತನಿಖೆ ಮಾಡುವ ಮೂಲಕ ಬಿಜೆಪಿ ವೀಡಿಯೋ ನಿಜವಾದದ್ದು ಎನ್ನುವುದನ್ನು ಒಪ್ಪಿಕೊಂಡಿದೆ ಎಂದಿದ್ದಾರೆ. ಯಡಿಯೂರಪ್ಪ ಅವರಿಗೆ ಎರಡು ನಾಲಗೆ ಇದೆಯೇ ಎಂದೂ ಪ್ರಶ್ನಿಸಿದ್ದಾರೆ.
ಅನರ್ಹರ ಆತಂಕ
ಈ ಮಧ್ಯೆ ಅನರ್ಹ ಶಾಸಕರು ಬೆಂಗಳೂರಿನ ರಮೇಶ ಜಾರಕಿಹೊಳಿ ಮನೆಯಲ್ಲಿ ಸಭೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ವೀಡಿಯೋ ಸುಪ್ರಿಂ ಕೋರ್ಟ್ ತೀರ್ಪಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಕುರಿತು ಚರ್ಚಿಸುತ್ತಿದ್ದಾರೆ. ತಮ್ಮ ಮುಂದಿನ ಹಾದಿ ಹೇಗಿರಬೇಕು ಎನ್ನುವ ಬಗ್ಗೆಯೂ ಅವರು ಪರಾಮರ್ಶಿಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಕೆಲವರು ಕಿಡಿಕಾರುತ್ತಿದ್ದಾರೆ.
ಒಟ್ಟಾರೆ ಯಡಿಯೂರಪ್ಪ ಭಾಷಣದ ವೀಡಿಯೋ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬಿಜೆಪಿ ತನ್ನದೇ ತಪ್ಪಿನಿಂದಾಗಿ ತೀವ್ರ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.
ಯಡಿಯೂರಪ್ಪ ಭಾಷಣ ಬಹಿರಂಗ; ಪ್ರಗತಿವಾಹಿನಿಗೆ ವೀಡಿಯೋ ಲಭ್ಯ
ಆಡಿಯೋ ಪ್ರಕರಣದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್
ನಿಮ್ಮ ಪ್ರೀತಿಯ ಪ್ರಗತಿವಾಹಿನಿಗೆ ವಾರ್ಷಿಕೋತ್ಸವದ ಸಂಭ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ