ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸುರೇಶ ಅಂಗಡಿ ರೈಲ್ವೆ ಸಚಿವರಾದ ನಂತರ ಬೆಳಗಾವಿ ಜಿಲ್ಲೆಗೆ ಹಾಗೂ ಉತ್ತರ ಕರ್ನಾಟಕಕ್ಕೆ ಹಲವು ಹೊಸ ಕೊಡುಗೆ ನೀಡುತ್ತಿದ್ದಾರೆ. ಅನೇಕ ಹೊಸ ರೈಲುಗಳನ್ನು ನೀಡಿದ್ದಾರೆ. ಕೆಲವು ರೈಲುಗಳನ್ನು ಬೆಳಗಾವಿವರೆಗೆ ವಿಸ್ತರಿಸಿದ್ದಾರೆ.
ಇದೀಗ ಎರಡು ಬೃಹತ್ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ಇವು ಜಾರಿಯಾದರೆ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯ ಜೊತೆಗೆ ನೂರಾರು ಉದ್ಯೋಗ ಸೃಷ್ಟಿಯಾಗಲಿದೆ.
ಕಿತ್ತೂರಿನಲ್ಲಿ ರೈಲ್ವೆ ಬಿಡಿಭಾಗಗಳ ತಯಾರಿಕಾ ಘಟಕ ಆರಂಭಿಸಲು ಸುರೇಶ ಅಂಗಡಿ ಯೋಚಿಸಿದ್ದು, ಇದಕ್ಕಾಗಿ ಜಮೀನು ನೀಡುವಂತೆ ರಾಜ್ಯಸರಕಾರವನ್ನು ಕೋರಿದ್ದಾರೆ. ಇದಕ್ಕಾಗಿ ಸುಮಾರು 300-400 ಎಕರೆ ಜಮೀನು ಬೇಕಾಗಿದೆ. ಸರಕಾರಿ ಜಮೀನು ಅಷ್ಟು ದೊಡ್ಡ ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಆದರೆ ರೈತರು ಜಮೀನು ಕೊಡಲು ಮುಂದಾಗುತ್ತಾರಾ ನೋಡಬೇಕಿದೆ.
ರೈಲ್ವೆ ಬಿಡಿಭಾಗಗಳ ತಯಾರಿಕಾ ಘಟಕ ಭಾರತದಲ್ಲಿ ಉತ್ತರ ಪ್ರದೇಶದಲ್ಲಿ ಮಾತ್ರವಿದೆ. ಅದೇ ಮಾದರಿಯಲ್ಲಿ ಕಿತ್ತೂರಲ್ಲೂ ಆರಂಭಿಸುವ ಯೋಚನೆ ಅಂಗಡಿ ಅವರದ್ದು. ಭಾರತೀಯ ರೈಲ್ವೆ ಬಳಕೆಗಷ್ಟೆ ಅಲ್ಲದೆ, ರಫ್ತು ಮಾಡುವುದಕ್ಕೂ ಅವಕಾಶವಿದೆ. ಸುಮಾರು 1400 -1500 ಕೋಟಿ ರೂ. ಬಂಡವಾಳ ಬೇಕಾಗುತ್ತದೆ.
ಇದರ ಜೊತೆಗೆ ದೇಸೂರಿನಲ್ಲಿ ರೈಲ್ವೆ ಕೋಚ್ ದುರಸ್ತಿ ಘಟಕ ಆರಂಭಿಸಲಾಗುತ್ತಿದೆ. ಇದಕ್ಕೆ ಈಗಾಗಲೆ ಯೋಜನೆ ತಯಾರಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕಂಟೇನರ್ ಡಿಪೋವನ್ನು ಸಾಂಬ್ರಾಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಪ್ರಕ್ರಿಯೆ ಈಗಾಗಲೆ ಆರಂಭವಾಗಿದೆ.
ಕರ್ನಾಟಕದ ಹಲವು ರೈಲ್ವೆ ಯೋಜನೆಗಳ ಸಂಬಂಧ ಸಚಿವ ಸುರೇಶ ಅಂಗಡಿ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕರ್ನಾಟಕ ಸರಕಾರದ ಬಂಡವಾಳದ ಪಾಲು ಮತ್ತು ಭೂಮಿ ನೀಡಿಕೆ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ
ಸುರೇಶ ಅಂಗಡಿಯಿಂದ ಬೆಳಗಾವಿಗೆ ಮತ್ತೊಂದು ಕೊಡುಗೆ
ಬೆಳಗಾವಿ-ಬೆಂಗಳೂರು ತತ್ಕಾಲ್: ಸುರೇಶ ಅಂಗಡಿ ಟ್ವೀಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ