Kannada NewsKarnataka NewsLatest

ವಿವಾಹ ನಿಶ್ಚಿತಾರ್ಥದ ವೇಳೆಯೇ ಪುಸ್ತಕ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಒತ್ತಡದ ಬದುಕಿನಲ್ಲಿ ನಾವು ಸಾಕಷ್ಟು ಜೀವನದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸುಂದರ ಬದುಕಿಗೆ ಮೌಲ್ಯಗಳು ಅಗತ್ಯ. ನಮ್ಮ ಬದುಕು ಆದರ್ಶವಾದರೆ ಸಮಾಜವನ್ನು ಆದರ್ಶಮಯವನ್ನಾಗಿ ರೂಪಿಸಲು ಸಾಧ್ಯವೆಂದು ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿಯವರು ನುಡಿದರು.

ಅವರು ನಗರದ ಹಿಂಡಲಗಾ ಗಣಪತಿ ದೇವಸ್ಥಾನದ ಹತ್ತಿರವಿರುವ ಗಣಾಧೀಶ ಲಾನ್ ಫಂಕ್ಷನ್ ಹಾಲ್‌ ನಲ್ಲಿ ಶಿವಾನಂದ ಕುಂದ್ರಾಳ ಹಾಗೂ ನಯನಾ ಮಾಳಾಯಿ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಜರುಗಿದ ಪ್ರೊ.ಶ್ರೀಕಾಂತ ಶಾನವಾಡರ ’ಬದಲಾಗೋಣವೇ…?’ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ನಾವು ವೇಷಭೂಷಣದಿಂದ ಬದಲಾಗುತ್ತೇವೆ, ಆಹಾರ ವಿಹಾರದಲ್ಲಿ ಬದಲಾವಣೆಯನ್ನು ತರುತ್ತೇವೆ ಆದರೆ ಉತ್ತಮ ಗುಣಸ್ವಭಾವಗಳಲ್ಲಿ ಬದಲಾವಣೆ ತರುವುದಿಲ್ಲ. ಬದಲಾವಣೆ ಎಂಬುದು ಅದು ನಮ್ಮ ಮನಸ್ಸಿಗೂ ಅಗತ್ಯವಿದೆ ಎಂದು ನುಡಿದರು.
ಕೃತಿ ಪರಿಚಯ ಮಾಡಿದ ಕೆಎಲ್‌ಇ ಪ್ರಸಾರಾಂಗದ ನಿರ್ದೇಶಕರಾದ ಡಾ.ಮಹೇಶ ಗುರನಗೌಡರು ಅವರು ಮಾತನಾಡುತ್ತ, ಪ್ರೊ.ಶ್ರೀಕಾಂತ ಶಾನವಾಡರ ’ಬದಲಾಗೋಣವೇ’ ಒಂದು ವಿಶಿಷ್ಟ ಕೃತಿ. ಚಿನ್ಮಯ ಪ್ರಕಾಶನದಿಂದ ಮೂಡಿಬಂದಿರುವ ಈ ಕೃತಿ ಬದುಕಿನ ಎಲ್ಲ ಆಗುಹೋಗುಗಳನ್ನು ತರ್ಕಿಸುವ ಲೇಖಕರು ಆತ್ಮಶೋಧನೆಗೆ ಈ ಕೃತಿಯಲ್ಲಿ ಕರೆನೀಡಿದ್ದಾರೆ.

ನಾನು-ನನ್ನದೆಂಬ ಅಹಂಮಿಕೆಯಿಂದ ಹೊರಬಂದು ಜೀವನ ಸತ್ಯಗಳನ್ನು ತೆರೆದು ತೋರಿಸುವುದೇ ಈ ಕೃತಿಯ ಜೀವಾಳ. ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ, ಜೀವನದ ಸವಾಲುಗಳನ್ನು ಎದುರಿಸಿ ಸುಂದರವಾಗಿ ಅನುಭವಿಸುವ ಮಾರ್ಗೋಪಾಯಗಳು ಪ್ರಸ್ತುತ ಕೃತಿಯಲ್ಲಿ ಚಿಂತನೆಗೆ ಒಳಪಡಿಸುತ್ತದೆ.

ಆತ್ಮೋನ್ನತಿ ಜೀವನದ ಧ್ಯೇಯವಾಗಬೇಕು, ಮೌಲ್ಯಗಳು ಕೇವಲ ಪದಗಳಾಗಿ ಉಳಿಯದೆ ಅನುಕರಣೆಯ ಮೆಟ್ಟಿಲುಗಳಾಗಬೇಕೆಂಬ ವಿಶ್ಲೇಷಣೆ ಕೃತಿಯಲ್ಲಿ ಸರಳವಾಗಿ ವ್ಯಕ್ತಗೊಂಡಿದೆ. ಈ ಕೃತಿಯಲ್ಲಿ ಶರಣ ಸಾಹಿತ್ಯ ಮೊದಲ್ಗೊಂಡು ಹಲವಾರು ದಾರ್ಶನಿಕರ ವಿಚಾರಗಳ ಗಣಿಯೇ ಇಲ್ಲಿದೆ.

ತಮ್ಮ ಮುತ್ತಿನಂತ ಮಾತಿನಿಂದ ಶಾನವಾಡರು ಓದುಗರ ಹೃದಯದ ಧ್ವನಿಯಾಗಿದ್ದಾರೆ. ಶರಣ ಸಾಹಿತ್ಯವನ್ನು ಆಳವಾಗಿ ಅಭ್ಯಾಸಿಸಿರುವ ಪ್ರೊ.ಶಾನವಾಡರ ವಿಚಾರಗಳನ್ನು ಸಹೃದಯರು ಆನಂದದಿಂದ ಸವಿಯಲಿ ಎಂದು ಹೇಳಿದರು.
ಗ್ರಂಥದಾಸೋಹಿ ವಿರುಪಾಕ್ಷಿ ಕುಂದ್ರಾಳ ಅವರು ಮಾತನಾಡುತ್ತ ಪ್ರೊ. ಶ್ರೀಕಾಂತ ಶಾನವಾಡ ಅವರು ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕೆಲವೊಂದು ಘಟನೆಗಳು, ತಮ್ಮ ಸುತ್ತ-ಮುತ್ತಲಿನ ಪರಿಸರ ಹಾಗೂ ಜನಗಳ ಕುರಿತಾದ ವಿದ್ಯಮಾನಗಳನ್ನು ಚಿಂತನೆಯ ರೂಪದಲ್ಲಿ ಮೂಡಿಬಂದಿವೆ.

ಜನಸಾಮಾನ್ಯರಿಗೆ ಇದರ ಲಾಭವನ್ನು ಒದಗಿಸಿ ಅವರ ಜೀವನವನ್ನು ಮಧುರಗೊಳಿಸಲು, ಹಸನುಗೊಳಿಸಲು ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ. ಶಾನವಾಡ ಅವರ ಪರಿಶ್ರಮದ ಚಿಂತನೆಗಳೂ ಪುಸ್ತಕ ರೂಪದಲ್ಲಿ ಶಾಶ್ವತವಾಗಿ ಉಳಿಯಬಲ್ಲವು ಎಂದು ಹೇಳಿದರು.

ಕೃತಿಕಾರರಾದ ಪ್ರೊ.ಶ್ರೀಕಾಂತ ಶಾನವಾಡ ಅವರು ಮಾತನಾಡುತ್ತ, ಈ ಕೃತಿ ಚಿಂತನಗಳ ಬುತ್ತಿಯಾಗಿದೆ. ಇಲ್ಲಿನ ವಿಚಾರಗಳು ಒಟ್ಟು ಸಮಾಜದ ವಿಚಾರಗಳು. ಒತ್ತಡ ಬದುಕಿಗೆ ಕೃತಿ ಔಷಧಿಯಾಗಿದೆ. ಸಮಾಜಮುಖಿಯಾದ ಧೋರಣೆಗಳನ್ನು ವ್ಯಕ್ತಪಡಿಸುವ ಕೃತಿಯನ್ನು ಸಹೃದಯರು ಪ್ರೀತಿಯಿಂದ ಓದಿದರೆ ಗ್ರಂಥಕರ್ತದ ಶ್ರಮ ಸಾರ್ಥಕಗೊಳ್ಳುವುದರಲ್ಲಿ ಸಂದೇಹವಿಲ್ಲವೆಂದು ಹೇಳಿದರು.

ಅಧ್ಯಕ್ಷತೆಯನ್ನು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶಿವಬಸಪ್ಪ ಸಿದ್ನಾಳ ವಹಿಸಿದ್ದರು. ಕೃತಿ ಬಿಡುಗಡೆಯನ್ನು ನವ ದಂಪತಿಗಳಾಲಿರುವ ಶಿವಾನಂದ ಕುಂದ್ರಾಳ ಹಾಗೂ ನಯನಾ ಮಾಳಾಯಿ ಅವರು ಬಿಡುಗಡೆಗೊಳಿಸಿದರು.

ವೇದಿಕೆಯ ಮೇಲೆ ರಾಚಪ್ಪ ಮಾಳಾಯಿ, ಬಸವೇಶ್ವರರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ವಿರುಪಾಕ್ಷಿ ಕುಂದ್ರಾಳ ಸ್ವಾಗತಿಸಿದರು. ಕಟ್ಟಿಮನಿ ನಿರೂಪಿಸಿದರು. ಎಸ್.ಜಿ.ದಳವಾಯಿ, ಡಾ.ಬಸವರಾಜ ಜಗಜಂಪಿ, ಎಸ್.ಎ.ವಿಭೂತಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button