![](https://pragativahini.com/wp-content/uploads/2023/06/iranna-kadadi-.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವ ಸರಕಾರದ ಸಚಿವರುಗಳು ಕುಣಿಯಲು ಬರದೇ ನೆಲಡೊಂಕು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು ಸಚಿವರಾಗಿ ತಮ್ಮ ಇಲಾಖೆ ಸಾಧನೆ ಏನು? ಎಂಬುದನ್ನು ತಿಳಿಸಲಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸವಾಲೆಸೆದಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಡ್ರೆಸ್, ವಿದೇಶ ಪ್ರವಾಸದ ಬಗ್ಗೆ ಟೀಕೆಗಳನ್ನು ಮಾಡಿದರೆ ನೀವು ದೊಡ್ಡ ನಾಯಕನಾಗುವುದಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದನ್ನು ಬಿಟ್ಟು ನಿಮ್ಮ ಸಾಧನೆ ಬಗ್ಗೆ ರಾಜ್ಯದ ಜನರಿಗೆ ಸ್ಪಷ್ಟೀಕರಣ ನೀಡಿ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 3 ಲಕ್ಷ ನೋಂದಾಯಿತ ಕಾರ್ಮಿಕರು ಇದ್ದಾರೆ. ಇವರಿಗಾಗಿ ಮುಂಚೆ 50 ಬೆಡ್ ಇಎಸ್ಐ ಆಸ್ಪತ್ರೆ ಇತ್ತು. ನಾನು ಕೇಂದ್ರ ಸರಕಾರದಿಂದ 100 ಬೆಡ್ ನ ಇಎಸ್ಐ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ. ಆದರೆ, ಇಲ್ಲಿಯವರೆಗೆ ಹಳೆಯ ಕಟ್ಟಡ ತೆರುಗೊಳಿಸಿ ಕಾಮಗಾರಿ ಯಾಕೆ ಪ್ರಾರಂಭ ಮಾಡುತ್ತಿಲ್ಲ ಎಂದು ಜಿಲ್ಲೆಯ ಜನರಿಗೆ ಉತ್ತರ ನೀಡಿ ಎಂದು ಹೇಳಿದರು.
ನೂತನ ಆಸ್ಪತ್ರೆ ಪ್ರಾರಂಭವಾಗುವವರೆಗೂ ಬಾಡಿಗೆಗೆ ಕಟ್ಟಡ ಪಡೆದು ಓಪಿಡಿ ಪ್ರಾರಂಬಿಸಲು ನಿರ್ಧರಿಸಲಾಗಿತ್ತು. ರಾಜ್ಯ ಸರಕಾರ ಇದನ್ನು ರದ್ದು ಮಾಡಿದೆ. ಕೇಂದ್ರದಿಂದ ಮಂಜೂರಾದ ಆಸ್ಪತ್ರೆ ನಿರ್ಮಾಣಕ್ಕೆ ಯಾಕೆ ಅವಕಾಶ ಕೊಡುತ್ತಿಲ್ಲ. ನೀವು ಮಾಡಿದ ಆದೇಶವನ್ನೇ ನೀವೇ ಯಾಕೆ ವಾಪಸ್ ಪಡೆದುಕೊಂಡಿರಿ? 160. ಕೋಟಿ ಹಣ ಮಂಜೂರು ಹಾಗಿದ್ದರೂ ಕೂಡ ನೂತನ ಕಟ್ಟಡ ನಿರ್ಮಾಣಕ್ಕೆ ಯಾಕೆ ಬಿಡುತ್ತಿಲ್ಲ. ನಿವು ಅಭಿವೃದ್ಧಿ ವಿರೋಧಿ ಇದ್ದೀರಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಿರುದ್ಧ ಕಡಾಡಿ ವಾಗ್ದಾಳಿ ನಡೆಸಿದರು.
ಕೇವಲ ಇಎಸ್ಐ ಆಸ್ಪತ್ರೆ ಮಾತ್ರವಲ್ಲದೆ ಇನ್ನು ಅನೇಕ ಅಭಿವೃದ್ಧಿ ಯೋಜನೆಗಳನ್ನು ಕಾಂಗ್ರೆಸ್ ನ ಸಚಿವರುಗಳು ತಡೆಹಿಡಿದು ಅಡ್ಡಿಪಡಿಸುತ್ತಿದ್ದಾರೆ. ಬರುವಂತ ದಿನಗಳಲ್ಲಿ ಈ ಬಗ್ಗೆ ಜನರ ಬಳಿ ಹೋಗಿ ತಿಳಿಸುವಂತಹ ಪ್ರಯತ್ನ ಮಾಡಲಾಗುವುದು. ಸಚಿವ ಸಂತೋಷ್ ಲಾಡ್ ಅವರಿಗೆ ಯಾರೂ ತಪ್ಪು ಮಾಹಿತಿ ನೀಡಿರಬಹುದು. ಹೀಗಾಗಿ ತಮ್ಮ ಆದೇಶವನ್ನು ವಾಪಸ್ ಪಡೆದು ಈ ಕೂಡಲೇ ಹೊಸ ಕಟ್ಟಡ ಕಾಮಗಾರಿ ಪ್ರಾರಂಭಿಸುವ ಮೂಲಕ ಕೇಂದ್ರ ಸರಕಾರದ ಅನುದಾನ ಸದ್ಬಳಿಕೆ ಆಗಬೇಕು ಎಂದು ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ