Politics

*ಕ್ಷೇತ್ರ ವಿಂಗಡಣೆ: ದಕ್ಷಿಣ ಭಾರತಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ:  ಸಚಿವ ಪ್ರಲ್ಹಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಕ್ಷೇತ್ರಗಳ ವಿಂಗಡಣೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುವುದಿಲ್ಲ. ಕಾಂಗ್ರೆಸ್ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿಗರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಏನೆಲ್ಲಾ ಹಬ್ಬಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

ಕ್ಷೇತ್ರ ವಿಂಗಡಣೆ ಕೈಗೊಂಡಲ್ಲಿ ದಕ್ಷಿಣ ಭಾರತದಲ್ಲಿ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂಬುದನ್ನು ಕೇಂದ್ರ ಗೃಹ ಸಚಿವರೂ ಹೇಳಿದ್ದಾರೆ.  ನಾನೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ದಕ್ಷಿಣ  ಭಾರತಕ್ಕೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಸಚಿವ ಜೋಶಿ ಭರವಸೆ ನೀಡಿದರು.

*ದಕ್ಷಿಣ ಭಾರತದಲ್ಲಿ ಬಿಜೆಪಿ ಎಂಪಿಗಳ ಸಂಖ್ಯೆಯೂ ದೊಡ್ಡದಿದೆ:* ಕರ್ನಾಟಕ, ತೆಲಂಗಾಣ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಎಂಪಿಗಳ ಸಂಖ್ಯೆ ಸಹ ದೊಡ್ಡದಿದೆ. ಬರೀ ಕಾಂಗ್ರೆಸ್ ಅಷ್ಟೇ ಇಲ್ಲ. ನಮಗೂ ಜವಾಬ್ದಾರಿ, ಕಾಳಜಿ ಅನ್ನೋದಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು ಸಚಿವ ಜೋಶಿ.

Home add -Advt

ಕ್ಷೇತ್ರ ವಿಂಗಡಣೆ ಸಂಸತ್ ಮುಂದೆ ಬಂದು ಚರ್ಚೆಯಾಗಬೇಕು, ಡಿ.ಲಿಮಿಟೇಶನ್ ಕಮಿಶನ್ ಗೆ ಶಿಫಾರಸ್ಸು ಆಗಬೇಕು, ಹೀಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಕಾಂಗ್ರೆಸ್ಸಿಗರು ಅದೆಲ್ಲಾ ಗೊತ್ತಿಲ್ಲದವರಂತೆ ಮಾತನಾಡುವುದು ಸರಿಯಲ್ಲ ಎಂದರು.

ಗ್ಯಾರೆಂಟಿ ಜಾರಿ ಮುನ್ನ ಚರ್ಚೆ ಆಗಬೇಕು ಎಂದಿದ್ದಾರೆ ತೆಲಂಗಾಣ ಸಿಎಂ:

ತೆಲಂಗಾಣ ಸರ್ಕಾರದಲ್ಲಿ ದುಡ್ಡಿಲ್ಲ. ಹಾಗಾಗಿ ಜಾರಿಗೂ ಮೊದಲು ಚರ್ಚೆಯಾಗಬೇಕು ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ. ಇನ್ನು ತಮಿಳುನಾಡು ಸ್ಟಾಲಿನ್ ಸರ್ಕಾರ ಕಡು ಭ್ರಷ್ಟ ಸರ್ಕಾರವಾಗಿದೆ. ಇದನ್ನೆಲ್ಲಾ ಮುಚ್ಚಿಕೊಳ್ಳಲು ಕ್ಷೇತ್ರ ವಿಂಗಡಣೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.

ಸಿಎಂ-ಡಿಸಿಎಂ ಒಗ್ಗಟ್ಟಿಲ್ಲ

ರಾಜ್ಯದ ಸಿಎಂ ಮತ್ತು ಡಿಸಿಎಂಗೆ ಒಗ್ಗಟ್ಟಿನಿಂದ ಹೋಗಿ ಎಂದು ಸಲಹೆ ನೀಡುವ ಮೂಲಕ ಇಬ್ಬರಲ್ಲೂ ಒಗ್ಗಟ್ಟಿಲ್ಲ ಎಂಬುದನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿದ್ದಾರೆ  ಎಂದರು ಜೋಶಿ.

ತಮ್ಮ ತಂದೆ 2028ರವರೆಗೆ ಇನ್ನೂ ಮೂರು ಬಾರಿ ಬಜೆಟ್ ಮಂಡಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹೇಳಿದ್ದಾರೆ. ಇನ್ನು ಕೆಲವರು ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಬಜೆಟ್ ಮಂಡಿಸುತ್ತಾರೆ ಎನ್ನುತ್ತಿದ್ದಾರೆ. ಇದರಲ್ಲೇ ಗುತ್ತಾಗುತ್ತಿದೆ ಎಷ್ಟು ಒಗ್ಗಟ್ಟಿದೆ ಎಂಬುದು ಎಂದು ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button