
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮನ ಐತಿಹಾಸಿಕ ಕಿತ್ತೂರು ನಾಡನ್ನು ಕಡೆಗಣಿಸಲಾಗಿದೆ ಎಂದು ಮಾ.18 ರಂದು ಕಿತ್ತೂರು ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.
ಕಲ್ಮಠದ ಶಂಕರ ಚಂದರಗಿ ಸಭಾ ಭವನದಲ್ಲಿ ಹಮ್ಮಿಕೊಂಡಿರುವ ನಾಗರಿಕರ ಸಭೆಯಲ್ಲಿ ಮಾತನಾಡಿದ, ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಅಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮನ ವೃತ್ತದಲ್ಲಿ ಬೆಳಿಗ್ಗೆ 9 ಗಂಟೆಗೆ ಪ್ರತಿಭಟನೆ ಪ್ರಾರಂಭ ಮಾಡಲಾಗುವುದು.
ಸರ್ಕಾರ ಬಜೆಟ್ ನಲ್ಲಿ ಬೇರೆ ಬೇರೆ ಪ್ರಾಧಿಕಾರಕ್ಕೆ ಸಾಕಷ್ಟು ಅನುದಾನ ಘೋಷಣೆ ಮಾಡಿದೆ. ಆದರೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡಿಲ್ಲ. ಕಿತ್ತೂರು ಪ್ರವಾಸಿ ತಾಣವಾಗಿ ಬೆಳೆಯಬೇಕು ಹಾಗೂ ಪೂರಕ ಬಜೇಟ್ ನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡಬೇಕು ಎಂದು ದಿ.18 ರಂದು ಕಿತ್ತೂರು ಬಂದ್ ಕರೆ ಕೊಡಲಾಗಿದೆ. ಈ ಬಂದ್ ಗೆ ಕಿತ್ತೂರು ನಾಡಿನ ಚನ್ನಮ್ಮಾಜಿಯ ಅಭಿಮಾನಿಗಳು ಬೆಂಬಲ ನೀಡಬೇಕು ಎಂದರು.