Health

*ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಿಂದ ಆಶಾ ಕಾರ್ಯಕರ್ತೆಯರಿಗಾಗಿ ಲಿವರ್ ತಪಾಸಣಾ ಶಿಬಿರ*

ಪ್ರಗತಿವಾಹಿನಿ ಸುದ್ದಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವಯದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಲಿವರ್ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗಾಗಿ ಲಿವರ್ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಆಸ್ಪತ್ರೆಯ ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ್ ಡಾ. ಸಂತೋಷ ಹಜಾರೆ ಮಾತನಾಡಿ, ಹೆಪಟೈಟಿಸ್ ‘ಬಿ ದೀರ್ಘಕಾಲದ ಲಿವರ್ ವ್ಯಾಧಿಗಳಿಗೆ ಹಾಗೂ ಹಿಪ್ಯಾಟೋ ಸೆಲ್ಯೂಲಾರ್ ಕಾರ್ಸಿನೋಮಾಗೆ ಪ್ರಮುಖ ಕಾರಣವಾಗಿದೆ. ಸುಮಾರು ಶೇ. 90ರಷ್ಟು ಸೋಂಕು ಹೊಂದಿದ ಗರ್ಭಿಣಿಯಿಂದ ನವಜಾತ ಶಿಶುವಿಗೆ ಹರಡುತ್ತದೆ. ಶೇ. 10ರಷ್ಟು ಸ್ಟರಿಲೈಸ್ಡ್ ಇಲ್ಲದ ಚುಚ್ಚುಮದ್ದು, ಟ್ಯಾಟೂ, ಅಕ್ಯೂಪಂಚರ್ ಸೂಜಿಗಳನ್ನು, ತಪಾಸಣೆಗೊಳ್ಪಡಿಸಿದ ರಕ್ತ ಬಳಸುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ. ಈ ಸೋಂಕಿನಿಂದ ಹೆಚ್‌ಬಿಎಸ್‌ಎಜಿ ರಕ್ತದಲ್ಲಿ ಕಂಡುಬರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ಹೆಪಟೈಟಿಸ್ ‘ಬಿ’ ವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದ ಇದರಿಂದ ರಕ್ಷಣೆ ಪಡೆಯಬಹುದು. ದೀರ್ಘಕಾಲದ ಹೆಪಟೈಟಿಸ್ ಬಿ ಸೋಂಕಿತರು ಸಿರೋಸಿಸ್ ಹಾಗೂ ಹಿಪ್ಯಾಟೋ ಸೆಲ್ಯೂಲಾರ್ ಕಾರ್ಸಿನೋಮಾದಿಂದ ಬಳಲುತ್ತಾರೆ. ಅದರಂತೆ ಹೆಪಾಟೈಟಿಸ ಸಿ ಕೂಡ ಅಪಾಯಕಾರಿ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ಕಳೆದ 15 ವರ್ಷಗಳಿಂದ ಉತ್ತರ ಕರ್ನಾಟಕದಾದ್ಯಂತ ಹೆಪಾಟೈಟಿಸ್ ಬಿ ಮತ್ತು ಸಿ ತಪಸಣಾ ಶಿಬಿರಗಳ ಮೂಲಕ ಸಾಮಾಜಿಕ ಸೇವೆ ಮಾಡಲಾಗುತ್ತಿದೆ. ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಾಂದನಿ ಅವರು ಮಾತನಾಡಿದರು. ಸುಮಾರು 200ಕ್ಕೂ ಅಧಿಕ ಆಶಾ ಕಾರ್ಯಕರ್ತರಿಗೆ ಜಿಐ ಮತ್ತು ಲಿವರ, ಹೆಪಟೈಟಿಸ್ ಬಿ ಮತ್ತು ಸಿ ವೈರಸ್, ಫೈಬ್ರೊಸ್ಕ್ಯಾನ್ ತಪಾಸಣೆ ನಡೆಸಿ, ಹೆಪಾಟೈಟಿಸ ಬಿ ಲಸಿಕೆ ನೀಡಲಾಯಿತು. ಶಿಬಿರದಲ್ಲಿ ಡಾ. ಸಂತೋಷ್ ಬಳ್ಳಾರಿ, ಡಾ. ಗೀತಾ ದೇಸಾಯಿ, ಡಾ. ಉಜ್ವಲ್ ನಿಶಾಂತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Home add -Advt

Back to top button