Politics

*ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಕುರಿತು ಕ್ಯಾಬಿನೆಟ್ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

ಪ್ರಗತಿವಾಹಿನಿ ಸುದ್ದಿ: ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಸಲ್ಲಿಕೆ ಆಗಿದ್ದು ವರದಿಯಾನುಸಾರ ಮುಂದೆ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಯವರು ಹಾಗೂ ಮಂತ್ರಿಮಂಡಲ ನಿರ್ಧರಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಂತಹ ಹಗರಣಗಳು ಒಂದೆರಡಲ್ಲ; ಅದರಲ್ಲೂ ಪಿಎಸ್‌ ಐ ನೇಮಕಾತಿ, ಉಪನ್ಯಾಸಕರ ನೇಮಕ, ಕೊರೋನಾ ಉಪಕರಣ ಖರೀದಿ, ಹೀಗೆ ಸಾಕಷ್ಟು ಹಗರಣಗಳು ನಡೆದಿದ್ದು, ಇವೆಲ್ಲದರ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ಸಮಗ್ರ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಒಪ್ಪಿಸಿದ್ದಾರೆ. ವರದಿಯು ಸಚಿವ ಸಂಪುಟದ ಮುಂದೆ ಚರ್ಚೆ ಆಗಲಿದೆ. ಮುಖ್ಯಮಂತ್ರಿಯವರು ಮತ್ತು ಸಚಿವ ಸಂಪುಟ ಮುಂದೆ ನಿರ್ಧಾರ ಕೈಗೊಳ್ಳುತ್ತದೆ, ಅದರ ಮೇಲೆ ಕ್ರಮ ಆಗಲಿದೆ ಎಂದು ಸಚಿವರು ಹೇಳಿದರು.

  • ನಟಿ ರನ್ಯಾ ರಾವ್‌ ಕೇಸ್; ಶಾಮೀಲಾಗಿದ್ದರೆ ಯಾರನ್ನೂ ಬಿಡುವುದಿಲ್ಲ

ಚಿತ್ರ ನಟಿ ರನ್ಯಾ ರಾವ್‌ ಕೇಸ್ ಸಿಐಡಿ ವಿಚಾರಣೆ ವಾಪಸ್ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಟಿ ರನ್ಯಾ ರಾವ್‌ ಕೇಸಿನ ಬಗ್ಗೆ ಮಾಧ್ಯಮದವರು (ನೀವು) ಏನ್ನೆಲ್ಲ ತೋರಿಸುತ್ತಿದ್ದೀರೋ ಅಷ್ಟೇ ನಮಗೆ ಗೊತ್ತು. ನನ್ನ ಇಲಾಖೆಯಲ್ಲೇನು ಇಂಟೆಲಿಜೆನ್ಸಿ ಇಲ್ಲ. ಮುಖ್ಯಮಂತ್ರಿಯವರು ಮತ್ತು ಗೃಹಮಂತ್ರಿಯವರಿಗೆ ಈ ಪ್ರಕರಣದ ಬಗ್ಗೆ ಸವಿಸ್ತಾರವಾಗಿ ಗೊತ್ತು. ಈ ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ದರೂ ಕೂಡ ತನಿಖೆಯಿಂದ ಹೊರಬೀಳುತ್ತದೆ. ನಂತರದಲ್ಲಿ ಏನೆಲ್ಲ ಕ್ರಮ ಎನ್ನುವುದು ನಿರ್ಧಾರವಾಗುತ್ತದೆ ಎಂದರು.

  • ಸಿಎಂ ಅವರಿಂದ ಉತ್ತಮ ಆಡಳಿತ

ಈ ಅವಧಿ ನಾನೇ ಪೂರ್ಣಗೊಳಿಸುವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಪಕ್ಷದ ಹಿರಿಯ ನಾಯಕರು, ದೊಡ್ಡ ಮಾಸ್‌ ಲೀಡರ್‌. ಅವರು ನಮ್ಮ ಸರ್ಕಾರವನ್ನು ಬಹಳ ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ಏನು ಮಾತನಾಡುತ್ತಾರೆಯೋ ಅದು ನಮಗೆ ಆಶೀರ್ವಾದ ಎಂದು ಸಚಿವರು ಹೇಳಿದರು.

Home add -Advt
  • ಮೀಸಲಾತಿ ಕೇಳುವ ಅಧಿಕಾರ ಎಲ್ಲರಿಗೂ ಇದೆ

ಮುಸ್ಲಿಮರು ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿರುವ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು, ನಾವು ಪಂಚಮಸಾಲಿಗಳು 2ಎ ಕೇಳುತ್ತಿದ್ದೇವೆ. ಬೇರೆಯವರು ಬೇರೆ ಮೀಸಲಾತಿ ಕೇಳುತ್ತಿದ್ಧಾರೆ. ಕೇಳುವಂತಹ ಅಧಿಕಾರ, ಹಕ್ಕು ಎಲ್ಲರಿಗೂ ಇರುತ್ತದೆ ಎಂದು ಸಚಿವರು ಹೇಳಿದರು.

  • ಬಾಗಲಕೋಟೆ ಮಗು ಸಾವು; ಕ್ರಮಕ್ಕೆ ಸೂಚನೆ

ಬಾಗಲಕೋಟೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಚಾಮರಾಜನಗರದಲ್ಲಿ ನಡೆದಂತಹ ಘಟನೆ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಕೂಡಲೇ ತುರ್ತು ಕ್ರಮ ವಹಿಸಲಾಗಿತ್ತು. ಆದರೆ, ಬಾಗಲಕೋಟೆಯಲ್ಲಿ ಮಗು ಸಾವನ್ನಪ್ಪಿರುವ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ವಹಿಸಬೇಕೆಂದು ಸೂಚನೆ ನೀಡುವುದಾಗಿ ಸಚಿವರು ತಿಳಿಸಿದರು.

Related Articles

Back to top button