ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಂತಾರಾಷ್ಟ್ರೀಯ ಪ್ಯಾರಾ ಕಬಡ್ಡಿ ಪಂದ್ಯದಲ್ಲಿ ಭಾರತ ಪ್ರತಿನಿಧಿಸುವ ಕ್ರೀಡಾಪಟುವಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಕರವೀರ ಯಲ್ಲಪ್ಪ ಮರೆಣ್ಣವರ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಈ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳಕರ್, ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಿದರು.
ಪ್ರತಿಭೆ ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇರುತ್ತದೆ. ಅದನ್ನು ಗುರುತಿಸಿ, ಬೆಳೆಸಲು ವಯಕ್ತಿಕ ಪ್ರಯತ್ನದ ಜೊತೆಗೆ ಸಾರ್ವಜನಿಕರ ಪ್ರೋತ್ಸಾಹ ಕೂಡ ಅಗತ್ಯ. ಆರ್ಥಿಕ ಪ್ರಾಬಲ್ಯವಿಲ್ಲದ ಎಷ್ಟೋ ಪ್ರತಿಭೆಗಳು ಕಮರಿ ಹೋಗುತ್ತಿವೆ ಎಂದು ಅವರು ವಿಷಾದಿಸಿದರು.
ಗಡಿ, ಭಾಷೆ, ರಾಜಕೀಯ, ಜಾತಿ ಎಲ್ಲವನ್ನೂ ಮೀರಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಹಿಂದಿನಿಂದಲೂ ನಾನು ಇಂತವರನ್ನು ಗುರುತಿಸಿ ನನ್ನ ಕೈಲಾದಷ್ಟು ನೆರವು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ನಾನು ನನ್ನ ಕ್ಷೇತ್ರವೋ, ಬೇರೆ ಕ್ಷೇತ್ರವೋ ಎನ್ನುವುದನ್ನು ಎಂದಿಗೂ ನೋಡಿಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ಯುವಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಬಾಲಕನ ಪಾಲಕರು ಈ ಸಂದರ್ಭದಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ