NationalPolitics

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ: ನವದೆಹಲಿಯಲ್ಲಿ ರಾಹುಲ್‌ ಗಾಂಧಿ ಜೊತೆ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್‌ ಲಾಡ್‌ ಸೇರಿ ಹಲವರು ಭಾಗಿ

ಪ್ರಗತಿವಾಹಿನಿ ಸುದ್ದಿ: ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸುವ ಸಂಬಂಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮತ್ತು ಇತರ ಸಚಿವರು ಭಾಗಿಯಾಗಿದ್ದರು.

ಇಂದು ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ಭಾಗವಹಿಸಿ ಮಂಡಳಿ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದರು.

ಸಭೆಯಲ್ಲಿ “ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ” ಸ್ಥಾಪಿಸುವ ತೀರ್ಮಾನಕ್ಕೆ ಬರಲಾಗಿದೆ. ಕಾರ್ಮಿಕ ಇಲಾಖೆಯ ಮತ್ತೊಂದು ಮಹತ್ವದ ಕ್ರಮದಿಂದಾಗಿ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರಿಗೆ ಸಹಾಯವಾಗಲಿದೆ.

ಅಮೆಜಾನ್, ಫ್ಲಿಪ್ ಕಾರ್ಟ್, ಜೆಪ್ಪೊ, ಬ್ಲಿಂಕಿಟ್‌ ಸೇರಿದಂತೆ ಪ್ಲಾಟ್‌ ಪಾರಂ ಆಧಾರಿತ ಸಂಸ್ಥೆಗಳಲ್ಲಿ ಅಸಂಖ್ಯಾತ ಕಾರ್ಮಿಕರು ಕೆಲಸ ಮಾಡುತಿದ್ದು, ಈ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರೂ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು.

Home add -Advt

ಸಂಬಂಧಿತ ಸಂಸ್ಥೆಗಳಿಂದ ಶೇ 5 ರಷ್ಟು ಸುಂಕ ಸಂಗ್ರಹಿಸುವುದು ಮತ್ತು ಉಳಿದ ಹಣವನ್ನು ಸರ್ಕಾರವೇ ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗಿಗ್‌ ಕಾರ್ಮಿಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಉದ್ದೇಶ ಇದೆ: ಸಂತೋಷ್‌ ಲಾಡ್‌


ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ವಿಶೇಷವಾಗಿ ಗಿಗ್‌ ಕಾರ್ಮಿಕರ ಬಗ್ಗೆ ಚರ್ಚಿಸಲಾಯಿತು. ಗಿಗ್‌ ಕಾರ್ಮಿಕರ ಬಗ್ಗೆ ರಾಹುಲ್‌ ಗಾಂಧಿ ಅವರು ವಿಶೇಷವಾಗಿ ಕಾಳಜಿ ಹೊಂದಿದ್ದಾರೆ. ರಾಜಸ್ಥಾನದಲ್ಲಿ ಬಂದ ಮಸೂದೆಗಿಂತ ಹೆಚ್ಚಿನ ಅಧ್ಯಯನ ಮಾಡಿ ನಾವು ಈವರೆಗೆ ಮೂವತ್ತಕ್ಕೂ ಹೆಚ್ಚು ಸಭೆಗಳನ್ನು ಮಾಡಿದ್ದೇವೆ. ಒಂದು ಅತ್ಯುತ್ತಮವಾದ ಬಿಲ್‌ ತಂದಿದ್ದೇವೆ. ಗಿಗ್‌ ಕಾರ್ಮಿಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಉದ್ದೇಶ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಅವರು ಮಾಧ್ಯಮಗಳಿಗೆ ತಿಳಿಸಿದರು.

ಈ ಮಸೂದೆ ಬಗ್ಗೆ ಅಂತಿಮ ಚರ್ಚೆ ಆಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆ ಆಗಿದೆ. ನಮ್ಮ ಸರ್ಕಾರ ಬಂದ ನಂತರ ಗಿಗ್‌ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ಪರಿಹಾರ ನೀಡುವ ಕ್ರಮ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಸಚಿವ ಸಂಪಟುದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಸುಗ್ರೀವಾಜ್ಞೆ ಮೂಲಕ ಕಾನೂನು ಮಾಡಿ ಜಾರಿಗೆ ತರುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಇದರಲ್ಲಿ ಉದ್ಯೋಗಿ, ಉದ್ಯೋಗದಾತ, ಕೈಗಾರಿಕಾ ವಿವಾದ ಅಥವಾ ಪ್ಲಾಟ್‌ ಫಾರಂನವರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಈ ಮಸೂದೆ ಉದ್ದೇಶ ಯಾರು ಗಿಗ್‌ ವಲಯದಲ್ಲಿ ಕೆಲಸ ಮಾಡುತ್ತಾರೆ ಅವರಿಗೆ ಅನುಕೂಲ ಮಾಡಿಕೊಡುವುದಾಗಿದೆ. ಇಂತಿಷ್ಟು ಶುಲ್ಕ ಪಡೆದು ಮಂಡಳಿ ಮೂಲಕ ಹಣ ಸಂಗ್ರಹಿಸಿ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತೇವೆ ಎಂದರು.

ಸಭೆಯಲ್ಲಿ ಗಿಗ್ ಕಾರ್ಯಕರ್ತರು

ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಭೆಗೆ ಆಗಮಿಸಲು ಗಿಗ್ ಕಾರ್ಮಿಕರ ವಲಯದ ಪರವಾಗಿ ಮೂವರು ಕಾರ್ಯಕರ್ತರಿಗೂ ಅವಕಾಶ ಒದಗಿಸಲಾಗಿತ್ತು.

ರಾಜ್ಯದವರಾದ ರಕ್ಷಿತಾ ದೇವ್, ಹೈದ್ರಾಬಾದಿನ ಶೇಖ್ ಸಲಾಹುದ್ದೀನ್, ನಿಖಿಲ್ ದೇವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಕಾರ್ಮಿಕ ಇಲಾಖೆ ಸಿದ್ದಪಡಿಸಿದ್ದ ಎಲ್ಲಾ ಎಂಟು ಅಂಶಗಳನ್ನೂ ರಾಹುಲ್ ಗಾಂಧಿ ಅವರು ಮೆಚ್ಚಿಕೊಂಡಿದ್ದಾರೆ.

ಮುಂದಿನ ಹಂತವಾಗಿ ಸಮಗ್ರ ಅಂಶಗಳನ್ನು ಒಳಗೊಂಡ ಮಸೂದೆಯನ್ನು ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ.
ಕಾರ್ಮಿಕ ಇಲಾಖೆ ಈಗಾಗಲೇ ಕಾರ್ಮಿಕರ ಗ್ರಾಚುಟಿ, ಸಿನಿಮಾ ಕಾರ್ಮಿಕರ ಬಿಲ್ ಸೇರಿ ಮೂರು ಪ್ರಮುಖ ಮಸೂದೆಗಳನ್ನಜ ತಂದಿದ್ದು ಈಗ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾಯ್ದೆ ತರಲು ಮುಂದಾಗಿರುವುದಕ್ಕೆ ರಾಜ್ಯದ ಅಸಂಘಟಿತ ಕಾರ್ಮಿಕ ವಲಯ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು ಸರ್ಕಾರದ ಈ ಕಾಳಜಿಗೆ ಅಭಿನಂದಿಸಿದ್ದಾರೆ.

Related Articles

Back to top button