ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಲೋಕಮಾನ್ಯ ಮಲ್ಟಿ ಪರ್ಪಸ್ ಕೋಆಪರೇಟಿವ್ ಸೊಸೈಟಿಗಳ ವ್ಯವಹಾರಗಳ ಕುರಿತು ತನಿಖೆಗೆ ಬೆಂಗಳೂರಿನಿಂದ ಸಹಕಾರ ಸಂಘಗಳ ಪ್ರತಿನಿಧಿಗಳು ಆಗಮಿಸಿದ್ದಾರೆ.
ಸೊಸೈಟಿಯಲ್ಲಿ ಬೇನಾಮಿ ವ್ಯವಹಾರಗಳು ನಡೆಯುತ್ತಿವೆ. ಬೇನಾಮಿ ಆಸ್ತಿ ಮಾಡಲಾಗಿದೆ. ಬೇನಾಮಿ ಹೆಸರಿನಲ್ಲಿ ಕೋಟ್ಯಾಂತರ ರೂ ವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಸೇರಿದಂತೆ 60ಕ್ಕೂ ಹೆಚ್ಚು ಜನರು ದೂರು ಸಲ್ಲಿಸಿದ್ದರು.
ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಂ ಸ್ವಾಮಿ ಹಾಗೂ ಇನ್ನೂ ಕೆಲವು ಶಾಸಕರು ಈ ದೂರಿಗೆ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದೆ. ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಹಕಾರ ಸಂಘಗಳ ರಜಿಸ್ಟ್ರಾರ್ ಶಿವಾನಂದ ಎನ್ನುವವರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶಾಸಕ ಅಭಯ ಪಾಟೀಲ ಸೇರದಂತೆ ಕೆಲವರು ದೂರು ನೀಡಿದ್ದರು. ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ಪರಿಶೀಲನೆ ಬಳಿಕ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೊಸೈಟಿಯ ಸಿಬ್ಬಂದಿ, ಅವರ ಸಂಬಂಧಿಕರು ಸೇರಿದಂತೆ ಹಲವರ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿದೆ. ಅನಗತ್ಯವಾಗಿ ಭಾರಿ ಪ್ರಮಾಣದಲ್ಲಿ ವೆಚ್ಚ ತೋರಿಸಲಾಗಿದೆ. ಗ್ರಾಹಕರಿಗೆ ವಂಚನೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಬೇಕೆಂದು ದೂರು ನೀಡಲಾಗಿದೆ ಎಂದು ಗೊತ್ತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ